ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ, ಲೋಕಸಭಾ ಸದಸ್ಯ ಎಸ್. ಬಂಗಾರಪ್ಪ ಇದೀಗ ಕಾಂಗ್ರೆಸ್‌ನತ್ತ ಒಲವು ತೋರಿದ್ದು, ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಆಂದೋಲನದಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಬಹಿರಂಗವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.ಅಲ್ಲದೆ, ಇದೇ ಸಂದರ್ಭದಲ್ಲಿ ಮಾತನಾಡಿದ ಬಂಗಾರಪ್ಪ, ಕೇಂದ್ರದಲ್ಲಿ ಕಾಂಗ್ರೆಸ್ ಜೊತೆ ಸಮಾಜವಾದಿ ಪಕ್ಷ ಕೈ ಜೋಡಿಸಿದೆ. ಶಿವಮೊಗ್ಗದಲ್ಲಿ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ತಮ್ಮನ್ನು ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಇದು ತಮಗೆ ಸಂತಸ ತಂದಿದೆ ಎಂದಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಮರಳುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಕಾಂಗ್ರೆಸ್ ಸೇರುವುದರಿಂದ ತಪ್ಪೇನೂ ಆಗುವುದಿಲ್ಲ. ಈ ಪ್ರಸ್ತಾಪವನ್ನು ಪಕ್ಷದ ಸಭೆಯ ಮುಂದಿಟ್ಟು ಹೈಕಮಾಂಡ್‌ಗೆ ತಿಳಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಂಗಾರಪ್ಪ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಗಳಿವೆ. |