ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಗಂಭೀರವಾದ ಗಣಿ ಅಕ್ರಮಗಳು ನಡೆದಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಕೇಂದ್ರದ ಮಾಜಿ ಸಚಿವ ಧನಂಜಯ ಕುಮಾರ್ ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಬೇಕಾಬಿಟ್ಟಿ ಗಣಿ ಲೈಸನ್ಸ್ ನೀಡಲಾಗಿದ್ದು, ಆ ಬಗ್ಗೆ ತನಿಖೆ ಆಗುವ ಅಗತ್ಯವಿದೆ. ಕಳೆದ ಆರು ತಿಂಗಳು ಬಿಜೆಪಿ ಅಧಿಕಾರಕ್ಕೆ ಬಂದ ಅವಧಿಯ ಬಗ್ಗೆ ಸಹ ತನಿಖೆ ನಡೆಯಲಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗಣಿ ಲೈಸನ್ಸ್ ನೀಡಿಲ್ಲ. ಇನ್ನು ಮುಂದೆ ಯಾವುದೇ ಹೊಸ ಗಣಿಗಾರಿಕೆಗೆ ಲೈಸನ್ಸ್ ನೀಡುವುದಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದೆ. ಲೋಕಾಯುಕ್ತರ ವರದಿಯಿಂದ ಸತ್ಯ ಬಹಿರಂಗವಾಗಿದ್ದು, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನೇರವಾಗಿ ತಮ್ಮ ಪ್ರಭಾವ ಬಳಸಿದ್ದಾರೆಂದ ಅಂಶ ವ್ಯಕ್ತಗೊಂಡಿದೆ. ಸರ್ಕಾರಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎನ್ನುವ ಸತ್ಯ ಹೊರಬಿದ್ದಿದೆ ಎಂದು ಧನಂಜಯ ಕುಮಾರ್ ನುಡಿದರು.
|