ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಉಂಟುಮಾಡಿರುವ ಲೋಕಾಯುಕ್ತ ವರದಿಯ ಕುರಿತು ಪ್ರತಿಕ್ರಿಯಿಸಿರುವ ಧರ್ಮಸಿಂಗ್, ಗಣಿ ಅಕ್ರಮದ ಕುರಿತು ಸಿಬಿಐ ತನಿಖೆ ನಡೆಯಲಿ ಎಂದು ಮುಖ್ಯಮಂತ್ರಿಗಳಿಗೆ ಸವಾಲೆಸೆದಿದ್ದಾರೆ.
ಲೋಕಾಯುಕ್ತ ನೀಡಿರುವ ವರದಿಯಲ್ಲಿ ನನ್ನ ಹೆಸರನ್ನು ದುರುದ್ದೇಶದಿಂದ ಸೇರಿಸಲಾಗಿದೆ ಎಂದ ಧರ್ಮಸಿಂಗ್, ಮುಖ್ಯಮಂತ್ರಿ ಹೋದಲ್ಲೆಲ್ಲಾ ಗಣಿ ಹಗರಣದಿಂದ 40 ಸಾವಿರ ಕೋಟಿ ರೂಗಳ ವಂಚನೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಗಣಿ ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.
"ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಹೊಸ ಪರವಾನಗಿಗಳನ್ನೂ ಯಾರಿಗೂ ಕೊಟ್ಟಿಲ್ಲ. ಹೀಗಿರುವಾಗ ಗಣಿ ವರದಿಯಲ್ಲಿ ನನ್ನ ಹೆಸರು ಬರಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿರುವ ಧರ್ಮಸಿಂಗ್, ಮುಖ್ಯಮಂತ್ರಿಗಳು ಗಣಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಯಾವ ಮುಖ್ಯಮಂತ್ರಿಗಳ ಕಾಲದಲ್ಲಿ ಎಷ್ಟೆಷ್ಟು ಗಣಿ ಲಾಭಿ ನಡೆದಿದೆ ಎಂಬುದು ಜನತೆಗೆ ಗೊತ್ತಾಗಲಿದೆ" ಎಂದು ನುಡಿದರು.
ಲೋಕಾಯುಕ್ತರು ನನಗೂ ನೋಟಿಸ್ ನೀಡಿದ್ದಾರೆ. ನಾನು ನೋಟಿಸ್‌ಗೆ ಉತ್ತರ ಕಳುಹಿಸಿದ್ದೇನೆ. ಲೋಕಾಯುಕ್ತ ವರದಿ ನೇರವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾಗಿತ್ತು. ಸರ್ಕಾರದ ಕೈ ಸೇರುವ ಮುಂಚೆಯೇ ಮಾಧ್ಯಮಗಳಿಗೆ ಬಿಡುಗಡೆಯಾಗಿದೆ. ಇದನ್ನು ಗಮನಿಸಿದರೆ ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸಲು ಲೋಕಾಯುಕ್ತ ವರದಿಯನ್ನು ಬಿಜೆಪಿ ಬಳಸಿಕೊಂಡಿದ್ದು, ತನ್ನ ಹೆಸರನ್ನು ದುರುದ್ದೇಶದಿಂದ ಸೇರಿಸಿರಬಹುದು ಎಂದು ಧರ್ಮಸಿಂಗ್ ಕಿಡಿಕಾರಿದ್ದಾರೆ. |