ನಾನು ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಅವರ ಸಂಬಂಧಿ, ರೈಲ್ವೇಯಲ್ಲಿ ಆಯ್ಕೆ ಮಂಡಳಿಯ ಸದಸ್ಯೆ ಎಂದು ಹೇಳುತ್ತಾ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಮಹಿಳೆಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರ ನಗರದ ಕಿರ್ಲೋಸ್ಕರ್ ಕಾಲೊನಿ ಮೂರನೇ ಹಂತದ ನಿವಾಸಿ ಎ.ಪ್ರೇಮಾ (46) ಬಂಧಿತ ವಂಚಕಿ. ಈಕೆಯ ಬಂಧನದೊಂದಿಗೆ ಕರ್ನಾಟಕವಲ್ಲದೆ ಕೇರಳ ಮತ್ತು ತಮಿಳುನಾಡುಗಳಲ್ಲೂ ಇದೇ ರೀತಿ ವಂಚಿಸುತ್ತಿರುವ ಜಾಲ ಬೆಳಕಿಗೆ ಬಂದಂತಾಗಿದೆ.
ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಈವರೆಗೆ 25ರಿಂದ 30 ಮಂದಿಗೆ ಆಸೆ ಹುಟ್ಟಿಸಿ ಸುಮಾರು 30 ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡಿದ್ದಾಳೆ ಎಂದು ಅಂದಾಜಿಸಲಾಗಿದೆ. ರೈಲ್ವೇ ಇಲಾಖೆಯಲ್ಲಿ ಟಿಟಿ, ಪ್ರಥಮ ದರ್ಜೆ ಸಹಾಯಕ ಹಾಗೂ ಇತರೆ ಹುದ್ದೆಗಳನ್ನು ಕೊಡಿಸುತ್ತೇನೆ ಅನ್ನುತ್ತಾ ಈಕೆ ನಿರುದ್ಯೋಗಿಗಳನ್ನು ಹುಡುಕುತ್ತಿದ್ದಳು ಎನ್ನಲಾಗಿದೆ.
ಹಿನ್ನೆಲೆ: ಈಕೆಯಿಂದ ವಂಚನೆಗೊಳಗಾದ ಮಾಗಡಿ ರಸ್ತೆಯ ಈಶ್ವರಿ ಎಂಜಿನಿಯರಿಂಗ್ ವರ್ಕ್ಸ್‌ನ ಎಸ್.ಯುವರಾಜ್ (34) ಎಂಬುವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವರಾಜ್ ಪತ್ನಿ ಮೇಘನಾ ಅವರಿಗೆ ರೈಲ್ವೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಕೊಡಿಸುವುದಾಗಿ 1.30 ಲಕ್ಷ ರೂ.ಗಳನ್ನು ಪಡೆದಿದ್ದಳು.
ಇದಕ್ಕೆ ಗ್ಯಾರಂಟಿಯಾಗಿ ಐಸಿಐಸಿಐ ಬ್ಯಾಂಕ್‌ನ 60 ಮತ್ತು 70 ಸಾವಿರ ರೂ.ಗಳ ಚೆಕ್ ಬರೆದುಕೊಟ್ಟು ಅಪಾಯಿಂಟ್ಮೆಂಟ್ ಆರ್ಡರ್ ಕೈಗೆ ಬಂದ ಮೇಲೆ ಚೆಕ್‌ಗಳನ್ನು ವಾಪಸ್ ಪಡೆಯುತ್ತೆನೆ ಎಂದು ತಿಳಿಸಿದ್ದಳು. ಆದರೆ ನಂತರ ನಾಪತ್ತೆಯಾದ ಈಕೆ ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂದಿರುಗಿಸದೆ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದಳು ಎನ್ನಲಾಗಿದೆ. |