ವಿಧಾನಮಂಡಲದ ಉಭಯ ಸದನಗಳ ಒಪ್ಪಿಗೆ ಪಡೆದೇ ಅಕ್ರಮ ಗಣಿಗಾರಿಕೆ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಲು ನಿರ್ಧಾರ ಕೈಗೊಳ್ಳಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಅಕ್ರಮ ಗಣಿಗಾರಿಕೆ ತನಿಖಾ ವರದಿಯಲ್ಲಿ ಉಲ್ಲೇಖವಾಗಿರುವಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಲ್ಲಿ ಹಿಂಜರಿಯುವುದಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಶಿಫಾರಸು ಸಮಿತಿ ವರದಿಯಂತೆ ಕ್ರಮ ಕೈಗೊಳ್ಳಲು ಬದ್ಧರಿರುವುದಾಗಿ ತಿಳಿಸಿದರು.ಅಕ್ರಮ ಗಣಿಗಾರಿಕೆ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಅಂದು ಒತ್ತಾಯಿಸಿತ್ತು. ಆದರೆ ವರದಿ ಸಲ್ಲಿಕೆಯಾಗಿರುವಾಗ ತನಿಖೆ ಸರಿಯಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ನವರು ಸಿಕ್ಕಿಬೀಳುವ ಕಾರಣದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಛೇಡಿಸಿದರು. ಬಂಗಾರಪ್ಪ ಪ್ರಚಾರ ಬಂಗಾರಪ್ಪನವರು ತಮ್ಮ ಮೇಲಿನ ಭಯದಿಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ. ಆದರೆ ರಾಜ್ಯದ ಜನ ಬಿಜೆಪಿಯ ಪರ ಇದ್ದು, ಎಲ್ಲ ಎಂಟೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. |