ರಾಜ್ಯದಲ್ಲಿ ಹೆಚ್ಚುತ್ತಿರುವ ಪೈರಸಿ ಹಾವಳಿ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ನೇತೃತ್ವದ ತಂಡ ಗೃಹಸಚಿವ ವಿ.ಎಸ್. ಆಚಾರ್ಯರಿಗೆ ಮನವಿ ಸಲ್ಲಿಸಿತು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಳಿ ಅಧ್ಯಕ್ಷೆ ಜಯಮಾಲ, ನಿಯೋಗದ ಕ್ರಮವನ್ನು ಗೃಹಸಚಿವ ಆಚಾರ್ಯ ಪರೀಶೀಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಮತ್ತೆ ಉಲ್ಬಣಿಸಿರುವ ಪೈರಸಿ ಹಾವಳಿ ತಡೆಯಲು ಗೂಂಡಾ ಕಾಯ್ದೆ ಬಳಸಬೇಕೆಂಬ ನಮ್ಮ ಮನವಿಯನ್ನು ಅವರು ಪರಿಗಣಿಸಿದ್ದಾರೆ ಎಂದ ನುಡಿದರು." ಪೈರಸಿ ತಡೆಯಲು ಗೂಂಡಾ ಕಾಯ್ದೆ ಬಳಸುವುದರ ಜೊತೆಗೆ, ಈ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ರಾಜ್ಯದಲ್ಲಿ ಸಿನೆಮೆಟೋಗ್ರಫಿ ಕಾನೂನಿಗೆ ತಿದ್ದುಪಡಿ ತರಬೇಕು. ಟೂರಿಂಗ್ ಟಾಕೀಸ್ಗಳಿಗೆ ಅನುಮತಿ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಲಾಗಿದೆ" ಎಂದು ತಿಳಿಸಿದರು.ಆಂಧ್ರ ಪ್ರದೇಶದಲ್ಲಿ ಈಗಾಗಲೇ ಪೈರಸಿ ತಡೆಗೆ ಗೂಂಡಾ ಕಾಯ್ದೆ ಜಾರಿಗೆ ತಂದು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟದಲ್ಲೂ 2005ರಿಂದ 2007ರವರೆಗೆ 6 ಸಾವಿರ ಪ್ರಕಣಗಳು ದಾಖಲಾಗಿವೆ. ಇವುಗಳಲ್ಲಿ ಕೇವಲ 27 ಪ್ರಕರಣಗಳನ್ನು ಮಾತ್ರ ಪರಿಹರಿಸಲು ಸಾಧ್ಯವಾಗಿದೆ. ಈ ಕಾರಣದಿಂದ ನಾವು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.1956 ರಲ್ಲಿ ಸಿನೆಮೆಟೋಗ್ರಫಿ ಕಾಯ್ದೆ ಜಾರಿಗೆ ತಂದಿದ್ದು, ಅಲ್ಲಿಂದ ಈವರೆಗೂ ತಿದ್ದುಪಡಿ ಮಾಡಿಲ್ಲ, ಕೂಡಲೇ ಕಾನೂನನ್ನು ಸರಳೀಕರಣಗೊಳಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಯಿಸಿದರು. ನಿಯೋಗದಲ್ಲಿ ಪಾರ್ವತಮ್ಮ ರಾಜ್ಕುಮಾರ್, ಸಾ.ರಾ. ಗೋವಿಂದು, ಕೆ.ಸಿ.ಎನ್.ಚಂದ್ರಶೇಖರ್, ರಾಜೇಂದ್ರಸಿಂಗ್ ಬಾಬು, ರಾಕ್ಲೈನ್ ವೆಂಕಟೇಶ್ ಇದ್ದರು. |