ಬಾಯಿ ಮುಚ್ಚಿಕೊಂಡು ಕೆಲಸ ಮಾಡ್ಬೇಕು. ರಾಜಕಾರಣಿಗಳ ರೀತಿಯಲ್ಲಿ ಸವಾಲು ಹಾಕೋದು ಬೇಡ.. ಸರ್ಕಾರದ ಬೆಂಬಲದಿಂದ ಅಹಂ, ಉದ್ಧಟತನ ಮತ್ತು ಅಧಿಕಪ್ರಸಂಗತನದಿಂದ ಮಾತನಾಡುತ್ತಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಗದರಿದ ಪರಿ!
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆ ಫೆರಿಫೆರಲ್ ರಸ್ತೆಗಳಿಗೆ ದುಬಾರಿ ಬಳಕೆ ಶುಲ್ಕ ವಿಧಿಸಿ ವಿವಾದ ಸೃಷ್ಟಿಸಿರುವ ನೈಸ್ ಮುಖ್ಯಸ್ಥ ಅಶೋಖ್ ಖೇಣಿ ವಿರುದ್ಧ ಆಕ್ರೋಶಭರಿತರಾಗಿ ನುಡಿದ ಮಾತು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟೋಲ್ ಫೀ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಖೇಣಿ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಯಾಕೆ ಅಂತ ನಂಗೊತ್ತಿಲ್ಲ. ಆದರೆ ರಾಜಕಾರಣಿಗಳ ರೀತಿ ಸವಾಲು ಹಾಕುತ್ತಿರುವ ಖೇಣಿ, ಈ ಕೆಲಸವನ್ನು ನಿಲ್ಲಿಸಿ ಸರಿಯಾದ ರಸ್ತೆ ನಿರ್ಮಿಸುವ ಕಡೆ ಗಮನ ಕೊಡಬೇಕು ಎಂದು ಖಂಡತುಂಡವಾಗಿ ಹೇಳಿದರು.
ಯಾವಾಗಲೂ ಸೌಮ್ಯ ಸ್ವಭಾವರಾದ ಕೃಷ್ಣ, ಖೇಣಿಯವರನ್ನು ಕುರಿತು ಆಡಿದ ಮಾತು ಪಕ್ಕದಲ್ಲಿದ್ದವರಿಗೂ ಅಚ್ಚರಿ ಮೂಡಿಸಿತು.
ಮತ್ತೂ ಮುಂದುವರೆದ ಕೃಷ್ಣ, ಖೇಣಿ ಸರ್ಕಾರ ನಡೆಸುವವರನ್ನು ಕೊಂಡುಕೊಳ್ಳಬಹುದು. ಆದರೆ, ರಾಜ್ಯದ ಜನತೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಮೂಲ ಒಪ್ಪಂದದಂತೆ ಯೋಜನೆಯ ಮೊದಲ ಹಂತ ಮುಗಿದ ಮೇಲೆ ಶುಲ್ಕವಿಧಿಸುವುದು ಒಳ್ಳೆಯದು. ಜನತೆಗೆ ಇದರ ಅರಿವಿದೆ ಎಂದರು. |