ಪಲ್ಸ್ ಪೋಲಿಯೋ ಲಸಿಕೆಯಿಂದ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆಂದು ವರದಿ ಬಿತ್ತರಿಸಿದ್ದ ಖಾಸಗಿ ಚಾನೆಲ್ ಸೇರಿದಂತೆ ಮಾಧ್ಯಮಗಳ ವಿರುದ್ಧ ಇರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಾಧ್ಯಮಗಳ ಮೇಲೆ ತಮಗೆ ಅಪಾರ ಗೌರವವಿದೆ. ಯಾವುದೇ ಮಾಧ್ಯಮದ ವಿರುದ್ಧ ನಮಗಾಗಲೀ ನಮ್ಮ ಸರ್ಕಾರಕ್ಕಾಗಲಿ ಪೂರ್ವಾಗ್ರಹವಿಲ್ಲ.
ಆದರೆ ವಿವೇಚನಾರಹಿತವಾಗಿ ತಕ್ಷಣದ ಸುದ್ದಿ ಪ್ರಸಾರ ಮಾಡುವ ಆತುರದಲ್ಲಿ ಸಾಮಾನ್ಯ ಜನತೆಯ ಜೀವನಕ್ಕೆ ತೊಂದರೆಯಾಗದಂತೆ ಸುದ್ದಿ ಬಿತ್ತರಿಸಬೇಕು ಎಂಬುದಷ್ಟೇ ನಮ್ಮ ಇಚ್ಛೆ ಎಂದು ತಿಳಿಸಿದರಲ್ಲದೆ, ಕಾನೂನು ತಜ್ಞರ ಜೊತೆ ಸಮಾಲೋಚಿಸಿದ ನಂತರ ಚಾನೆಲ್ ಅಥವಾ ಇತರೆ ಮಾಧ್ಯಮಗಳ ವಿರುದ್ಧ ಇರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.
ಹಿನ್ನೆಲೆ: ಪಲ್ಸ್ ಪೋಲಿಯೋ ಕುರಿತು ಖಾಸಗಿ ಚಾನೆಲ್ ಒಂದು ತಪ್ಪು ವರದಿ ಮಾಡಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಕ್ಕಳ ಪೋಷಕರು ಆತಂಕಕ್ಕೊಳಗಾಗಿದ್ದರು.
ರಾತ್ರೋರಾತ್ರಿ ಸುದ್ದಿ ಹಬ್ಬಿದ್ದರಿಂದ ಚಳಿಯನ್ನೂ ಲೆಕ್ಕಿಸದೆ ಜನ ಆಸ್ಪತ್ರೆಗೆ ದಾಂಗುಡಿಯಿಟ್ಟು ಆಸ್ಪತ್ರೆಯಲ್ಲಿ ಘರ್ಷಣೆ-ದಾಂಧಲೆ ನಡೆದಿತ್ತು.
ಗೃಹಸಚಿವ ಆಚಾರ್ಯರು ಈ ವಿಷಯದ ಬಗ್ಗೆ ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿ ನಿನ್ನೆ ಎಚ್ಚರಿಸಿಯೂ ಇದ್ದರು. |