ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇಂಗಿತವನ್ನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಜಿಲ್ಲಾ ಕಾಂಗ್ರೆಸ್ ಸಮಿತಿ ಈಗಾಗಲೇ ನಮಗೆ ಸ್ವಾಗತ ನೀಡಿದೆ. ಕಾಗೋಡು ತಿಮ್ಮಪ್ಪನವರೂ ಸೇರಿದಂತೆ ಹಲವು ಮುಖಂಡರೂ ತಮ್ಮ ಕಾಂಗ್ರೆಸ್ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ರಾಜ್ಯ ಸಮಿತಿ ಪ್ರತಿಕ್ರಿಯೆ ತಿಳಿಯಬೇಕಾಗಿದೆ ಎಂದಷ್ಟೇ ತಿಳಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ನೆರೆ ರಾಜ್ಯಗಳಲ್ಲಿರುವಂತೆ ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಗುರಿ ನಮಗಿತ್ತು. ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಸಮಾಜವಾದಿ ಪಕ್ಷವನ್ನು ಈ ದೃಷ್ಟಿಯಿಂದಲೇ ನಾವು ಕರ್ನಾಟಕಕ್ಕೆ ಪರಿಚಯ ಮಾಡಿಸಿದ್ದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯತೀತ ಪಕ್ಷಗಳು ಒಂದಾಗುವ ಅವಶ್ಯಕತೆಯಿದ್ದು ಅದಕ್ಕಾಗಿ ತಾವು ಕಾಂಗ್ರೆಸ್ ಸೇರುವ ಮನಸ್ಸು ಮಾಡಿರುವುದಾಗಿ ಬಂಗಾರಪ್ಪ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಭವಿಷ್ಯ? ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಲವು ಬಾರಿ ಸೆಡ್ಡು ಹೊಡೆದಿರುವ ಬಂಗಾರಪ್ಪ, ಹೊಸ ಪಕ್ಷವನ್ನೂ ಕಟ್ಟಿದ್ದದ್ದು. ಅಷ್ಟೇ ಸಲೀಸಾಗಿ ಅವುಗಳನ್ನು ವಿಸರ್ಜಿಸಿಯೂ ಇದ್ದರು. ಬಂಡಾಯ ಮನೋಭಾವದ ಬಂಗಾರಪ್ಪ ಮತ್ತೆ ಕಾಂಗ್ರೆಸ್ ಸೇರುತ್ತಿರುವುದಕ್ಕೆ ಹೊಸದೇನೂ ಇಲ್ಲ ಎನ್ನುವುದೇ ರಾಜ್ಯದ ಜನರ ಅನಿಸಿಕೆ.
ಆದರೆ ರಾಜ್ಯ ಸಮಾಜವಾದಿ ಪಕ್ಷವನ್ನು ಅವರು ಅಷ್ಟೇ ಸಲೀಸಾಗಿ ಕಾಂಗ್ರೆಸ್‌ನೊಂದಿಗೆ ವೀಲೀನಗೊಳಿಸುವರೇ. ಅಥವಾ ಅದರ ಅಸ್ತಿತ್ವವನ್ನು ಹಾಗೆಯೇ ಉಳಿಸಿಕೊಳ್ಳುವರೇ? ಎಂಬುದನ್ನು ಕಾದುನೋಡಬೇಕಾಗಿದೆ.
|