ರಾಜ್ಯದಲ್ಲಿ ಈಗ ನಡೆಯುತ್ತಿರುವ ಉಪಚುನಾವಣೆ ರಾಜ್ಯ ರಾಜಕೀಯದಲ್ಲಿ ಹೇಳಿಕೊಳ್ಳುವ ಬದಲಾವಣೆಯನ್ನೇನೂ ಮಾಡದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದ ಮಧ್ಯೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಕೆಲವರು ರಾಜಕೀಯ ದಿಕ್ಸೂಚಿ, ರಾಜ್ಯದಲ್ಲಿ ಬಿರುಗಾಳಿ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಆದರೆ ಇದೆಲ್ಲ ಕೇವಲ ಕಲ್ಪನೆಯಷ್ಟೇ ಎಂಬುದು ದೇವೇಗೌಡರ ಅಭಿಮತ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ದೃಷ್ಟಿಯಿಂದ ಹಣ ಹೆಂಡ ಹಂಚಿರುವ ಸತ್ಯ ಜನರ ಕಣ್ಣಮುಂದೆಯೇ ಇದೆ. ಕೇವಲ ಆರು ತಿಂಗಳ ಆಡಳಿತಕ್ಕೆ ಜನ ರೋಸಿಹೋಗಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಮತದಾರ ಚುನಾವಣೆಯಲ್ಲಿ ಉತ್ತರ ಕೊಡುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು.
ಲೋಕಸಭೆಗೆ ಹೊಂದಾಣಿಕೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಉಪಚುನಾವಣೆಯ ಫಲಿತಾಂಶ ತೃತೀಯ ರಂಗದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. |