ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ಇದೀಗ ಕ್ಷಣಗಣನೆ ಪ್ರಾರಂಭವಾಗಿದೆ.
ಶನಿವಾರ ನಡೆಯಲಿರುವ ಮತದಾನದ ಅಂಗವಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಚಾರ ಅಂತ್ಯಗೊಂಡ ಬಳಿಕ ವಿವಿಧ ಪಕ್ಷಗಳ ಮುಖಂಡರು ಕ್ಷೇತ್ರಗಳಿಂದ ಹೊರ ಹೋಗುವಂತೆ ಸೂಚನೆ ನೀಡಲಾಗಿದೆ. ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಬಾರ್ ಮತ್ತು ರೆಸ್ಟೊರೆಂಟ್‌ಗಳನ್ನು ಎರಡು ದಿನಗಳ ಕಾಲ ಬಂದ್ ಮಾಡುವಂತೆ ಆದೇಶ ನೀಡಲಾಗಿದೆ.
ಮುಕ್ತ ಹಾಗೂ ಶಾಂತಿಯುತ ಮತ್ತು ನ್ಯಾಯಸಮ್ಮತ ಉಪಚುನಾವಣೆಗಾಗಿ ಚುನಾವಣಾ ಆಯೋಗ ಸರ್ವ ಸನ್ನದ್ಧವಾಗಿದ್ದು, 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1670 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಪ್ರತಿ ಮತಗಟ್ಟೆಗೂ ನಾಲ್ವರೂ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ಇರುವಂತೆ ವ್ಯವಸ್ಥೆ ಮಾಡಿರುವುದು ಈ ಬಾರಿ ಚುನಾವಣೆಯ ವಿಶೇಷ. ಇದಲ್ಲದೆ, ಪ್ರತಿ 20 ಮತಗಟ್ಟೆಗೆ ಒಬ್ಬರಂತೆ ವಲಯ ಮ್ಯಾಜಿಸ್ಟ್ರೇಟ್ ಮತ್ತು ತುರ್ತು ಸಂದರ್ಭಗಳಿಗಾಗಿ ಮೊಬೈಲ್ ಪೊಲೀಸ್ ಪಡೆ ವ್ಯವಸ್ಥೆ ಮಾಡಲಾಗಿದೆ.
ಈ ನಡುವೆ ಪಕ್ಷಗಳ ಮುಖಂಡರು ಮನೆ ಮನೆಗೆ ತೆರಳುವ ಮೂಲಕ ಇಂದು ಮತಯಾಚನೆ ನಡೆಸುತ್ತಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಮಿನಿ ಸಮರದ ಫಲಿತಾಂಶ ನಾಳೆ ಮತಪೆಟ್ಟಿಗೆಯೊಳಗೆ ದಾಖಲಾಗಲಿದೆ.
|