ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳು ತಾ ಮುಂದು- ನಾ ಮುಂದು ಎಂಬಂತೆ ಹಣ-ಹೆಂಡ ಹಂಚಿಕೆಯಲ್ಲಿ ತೊಡಗಿವೆ. ಏತನ್ಮಧ್ಯೆ ರಾಯಚೂರು ದೇವದುರ್ಗ ಕ್ಷೇತ್ರದಲ್ಲಿ 20 ಲಕ್ಷ ರೂಪಾಯಿಯನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ದೇವದುರ್ಗ ಕ್ಷೇತ್ರದಲ್ಲಿ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು 20ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವುದಾಗಿಯೂ ಹೇಳಿದ್ದಾರೆ.
ಆದರೆ ಬಂಧಿತರು ಯಾವ ಪಕ್ಷಕ್ಕೆ ಸೇರಿದವರು ಎಂಬ ಕುರಿತು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಎಂಟು ಕ್ಷೇತ್ರಗಳಲ್ಲಿನ ಚುನಾವಣಾ ಪ್ರಚಾರಕ್ಕೆ ಗುರುವಾರವೇ ತೆರೆ ಬಿದ್ದಿದೆ. ಆ ನಿಟ್ಟಿನಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳು ಮನೆ,ಮನೆಗೆ ತೆರಳಿ ಮತ ಯಾಚಿಸುತ್ತಿವೆ. ಕೆಲವೆಡೆ ಸಣ್ಣ-ಪುಟ್ಟ ಘರ್ಷಣೆಗಳು ನಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ಜೆಡಿಎಸ್ ಧರಣಿ: ಬೆಳಗಾವಿಯಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅವರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ.
ಮತದಾನ ಹೆಸರಿನ ಚೀಟಿ ಹಂಚಲು ಹೋದ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಎಲ್ಲರೂ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ದೇವೇಗೌಡ ಆಕ್ರೋಶ: ಹುಕ್ಕೇರಿ, ಬೆಳಗಾವಿ, ಮಧುಗಿರಿ ಸೇರಿದಂತೆ ಎಲ್ಲೆಡೆ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ದೌರ್ಜನ್ಯ ಎಸಗುತ್ತಿರುವುದಾಗಿ ಪಕ್ಷದ ವರಿಷ್ಠ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು, ಪೊಲೀಸರು ಬಿಜೆಪಿಯ ವಕ್ತಾರರಂತೆ ಕರ್ತವ್ಯ ನಿರತರಾಗಿದ್ದು, ಚುನಾವಣೆ ಮುಕ್ತವಾಗಿ ನಡೆಯುವ ಯಾವ ಸಾಧ್ಯತೆಯೂ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಧುಗಿರಿ ಅತಿ ಸೂಕ್ಷ್ಮ ಪ್ರದೇಶ: ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮಧುಗಿರಿ ಅತಿ ಸೂಕ್ಷ್ಮ ಪ್ರದೇಶ ಎಂದು ಚುನಾವಣಾ ಆಯೋಗ ಗುರುತಿಸಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಹಿನ್ನೆಲೆಯಲ್ಲಿ, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
|