ರಂಗಾಯಣ ನಿರ್ದೇಶಕರಾಗಿ ಮಹಿಳೆಯೊಬ್ಬರನ್ನು ಶೀಘ್ರವೇ ನೇಮಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಭರವಸೆ ನೀಡಿದ್ದಾರೆ.
ಮೈಸೂರಿನಲ್ಲಿ ವನರಂಗದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶೋಭಾ, ರಂಗಾಯಣಕ್ಕೆ ನಿರ್ದೇಶಕ ನೇಮಕ ವಿಳಂಬವಾಗಲೂ ಒಂದು ಸ್ವಾರ್ಥವೂ ಇದೆ. ಅದೇನೆಂದರೆ ರಾಜ್ಯದ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿರುವ ತಮಗೆ ಮಹಿಳೆಯರನ್ನೇ ರಂಗಾಯಣ ನಿರ್ದೇಶಕ ಸ್ಥಾನಕ್ಕೂ ನೇಮಿಸಬೇಕೆಂಬ ಇಚ್ಛೆ ಇದೆ ಎಂದರು.
ಈಗಾಗಲೇ ಹಿರಿಯ ಕಲಾವಿದರಿಗಾಗಿ ಶೋಧಿಸಲಾಗುತ್ತಿದ್ದು, ಶೀಘ್ರವೇ ನೇಮಕ ನಡೆಯಲಿದೆ ಎಂದ ಸಚಿವರು, ರಂಗಭೂಮಿ ನಿಂತ ನೀರಲ್ಲ. ಆದ್ದರಿಂದ ರಂಗಾಯಣವನ್ನು ವಿಸ್ತರಿಸಲು ಅಗತ್ಯವಿರುವ ಭೂಮಿಯನ್ನು ನಗರದ ಪ್ರಶಾಂತ ಸ್ಥಳದಲ್ಲಿ ನೋಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ 10 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ರಂಗಾಯಣವನ್ನು ಬೆಳೆಸಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು. |