ಲೋಕಾಯುಕ್ತರು ನೀಡಿರುವ ವರದಿಯನ್ನು ತಿದ್ದುವ ಅಧಿಕಾರ ಯಾರಿಗೂ ಇಲ್ಲ. ಅದನ್ನು ಅರ್ಥಮಾಡಿಕೊಳ್ಳದ ವಿರೋಧ ಪಕ್ಷದವರು ಮನಬಂದಂತೆ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಕಾರಿದ್ದಾರೆ.
ತುರುವೇಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ವರದಿಯನ್ನು ತಿರುಚುವುದು ಅಪರಾಧ. ಅಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಿಲ್ಲ. ವಿರೋಧ ಪಕ್ಷಗಳು ಲಘುವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ರಾಜ್ಯ ಚುನಾವಣಾ ಆಯೋಗದ ವಿರುದ್ಧ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಯೋಗದ ಮೇಲೆ ನಂಬಿಕೆ ಕಳೆದುಕೊಂಡಂತೆ ವರ್ತಿಸುತ್ತಿರುವ ಈ ಪಕ್ಷಗಳ ವರ್ತನೆ ಸರಿಯಲ್ಲ. ಆಯೋಗ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾಡಿರುವ ಆರೋಪದಂತೆ ಶ್ವೇತಪತ್ರ ಹೊರಡಿಸುವ ಅಗತ್ಯವಿಲ್ಲ ಎಂದ ಮುಖ್ಯಮಂತ್ರಿಗಳು, ರಾಜ್ಯದ ಹಣಕಾಸಿನ ಪರಿಸ್ಥಿತಿ ಹಾಗೂ ರಾಜ್ಯದ ಅಭಿವೃದ್ದಿಗೆ ಸಂಬಂಧಪಟ್ಟ ಸಮಗ್ರ ವಿಷಯಗಳನ್ನು ಜನವರಿ 16 ರಿಂದ 3 ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ. ವಿರೋಧ ಪಕ್ಷಗಳು ಟೀಕೆ ಮಾಡುವ ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದರು. |