ರಾಜ್ಯದ ಎಂಟು ಚುನಾವಣಾ ಕ್ಷೇತ್ರಗಳಲ್ಲಿ ಅತಿ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಲ್ಪಟ್ಟ ಮಧುಗಿರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಮಾತಿನ ಚಕಮಕಿ ನಡೆಯಿತು.
ಮಧುಗಿರಿ ಮೂರು ಪಕ್ಷಗಳಿಗೂ ಪ್ರತಿಷ್ಠಿತ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ, ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಮೂಲಕ ಹಣ ಮತ್ತು ಹೆಂಡದ ಹೊಳೆಯೇ ಹರಿದಿದೆ. ಏತನ್ಮಧ್ಯೆ ಜೆಡಿಎಸ್‌ನಿಂದ ಅನಿತಾಕುಮಾರಸ್ವಾಮಿ, ಬಿಜೆಪಿಯಿಂದ ಚೆನ್ನಿಗಪ್ಪ ಹಾಗೂ ಕಾಂಗ್ರೆಸ್‌ನಿಂದ ಕೆ.ಎನ್. ರಾಜಣ್ಣ ಅವರು ಅಖಾಡದಲ್ಲಿದ್ದಾರೆ.
ಆದರೆ ಶನಿವಾರ ಮತದಾನ ನಡೆಯುತ್ತಿದ್ದ ವೇಳೆ ಕುಮಾರಸ್ವಾಮಿ ಭೇಟಿ ನೀಡಿರುವುದು ಚುನಾವಣಾ ನೀತಿಯ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್‌ನ ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಕುಮಾರಸ್ವಾಮಿ ಅವರ ಜತೆಗಿದ್ದ ಜಮೀರ್ ಅಹಮ್ಮದ್ ಅವರು ರಾಜಣ್ಣ ಅವರ ಪತ್ನಿ ಕೂಡ ಮಧುಗಿರಿ ಕ್ಷೇತ್ರದಲ್ಲಿ ಇದ್ದಾರಲ್ಲ ಅದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವಾ ಎಂದು ಜಮೀರ್ ಮಾತು ಬೆಳೆಸಿದ ಪರಿಣಾಮ ಪರಿಸ್ಥಿತಿ ಉದ್ನಿಗ್ನಗೊಂಡಿತ್ತು.
ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಕೂಡ ವಾಗ್ವಾದಕ್ಕೆ ಇಳಿದಾಗ ಪೊಲೀಸರು ಮಧ್ಯಪ್ರವೇಶಿಸುವ ಮೂಲಕ ಗೊಂದಲವನ್ನು ತಿಳಿಗೊಳಿಸಿದರು.
ಏತನ್ಮಧ್ಯೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಜೆಡಿಎಸ್‌ನ ಎರಡು ವಾಹನಗಳನ್ನು ಕೊಡಿಗೇನಹಳ್ಳಿಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, 13 ಮಂದಿ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. |