ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಕೆಲವಡೆ ಸಣ್ಣಪುಟ್ಟ ಘಟನೆ ಹೊರತುಪಡಿಸಿ, ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇ.67.02ರಷ್ಟು ಮತದಾನವಾಗಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ದೂರು ಕ್ಷೇತ್ರದ ಸಿದ್ದರಾಜು ಅವರ ಅಕಾಲಿಕ ಮರಣದಿಂದ ಆ ಸ್ಥಾನ ತೆರವಾಗಿದ್ದರೆ, ಉಳಿದ 7 ಕ್ಷೇತ್ರಗಳಲ್ಲಿ ಆಪರೇಶನ್ ಕಮಲದಿಂದ ಉಪಚುನಾವಣೆ ನಡೆಯುವಂತಾಗಿತ್ತು. ಆ ನಿಟ್ಟಿನಲ್ಲಿ ಶನಿವಾರ ಎಂಟು ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.
8 ಕ್ಷೇತ್ರಗಳಲ್ಲಿ 73ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಈಗಾಗಲೇ ಮತದಾರರು ತಮ್ಮ ತೀರ್ಪನ್ನು ನೀಡಿದ್ದು, ಅದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿಸೆಂಬರ್ 30ರಂದು ಮತಎಣಿಕೆ ನಡೆಯಲಿದೆ.
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 76 ರಷ್ಟು ಮತದಾನ ದಾಖಲಾಗುವ ಮೂಲಕ ಅತಿ ಹೆಚ್ಚು ಮತದಾನ ದಾಖಲಾಗಿದ್ದರೆ, ದೇವದುರ್ಗದಲ್ಲಿ ಶೇ. 48ರಷ್ಟು ಮತದಾನ ದಾಖಲಾಗಿದೆ.
ಉಳಿದಂತೆ ತುರುವೇಕೆರೆಯಲ್ಲಿ ಶೇ. 67 ಮತದಾನ ನಡೆದಿದ್ದರೆ, ದೊಡ್ಡಬಳ್ಳಾಪುರದಲ್ಲಿ ಶೇ. 70, ಹುಕ್ಕೇರಿಯಲ್ಲಿ ಶೇ.76, ಅರಭಾವಿಯಲ್ಲಿ ಶೇ.76, ಮಧುಗಿರಿಯಲ್ಲಿ ಶೇ. 65ರಷ್ಟು ಮತದಾನ ದಾಖಲಾಗಿದೆ. |