ಪ್ರಿಸ್ಟೇಜ್ ಕಟ್ಟಡ ಕುಸಿತ ಪ್ರಕರಣ ಇನ್ನು ಹಸಿರಾಗಿರುವಾಗಲೇ ನಗರದ ಕೆ. ಆರ್. ಪುರಂನ ಭಟ್ಟರಹಳ್ಳಿಯಲ್ಲಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ಎಂಟು ಮಂದಿ ಗಾಯಗೊಂಡಿದ್ದು, ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ರಾಜಕಾರಣಿಗಳ ಸಂಬಂಧಿಕರೊಬ್ಬರಿಗೆ ಸೇರಿದ ಕಟ್ಟಡವೆಂದು ತಿಳಿದು ಬಂದಿದ್ದು, ಫ್ಯಾಕ್ಟರಿ ನಡೆಸಲು ಕಟ್ಟಡ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳ ತುರ್ತು ಕಾರ್ಯಾಚರಣೆ ನಡೆಸಿದೆ. ಅವಶೇಷಗಳಡಿಯಲ್ಲಿ ಇನ್ನು ಹೆಚ್ಚಿನ ಜನರು ಸಿಲುಕಿರುವ ಬಗ್ಗೆ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಈ ಕುರಿತು ಕಟ್ಟಡದ ನಿರ್ಮಾಣದ ಮಾಲೀಕರು, ಇಂಜಿನಿಯರ್ ಗಳು ಸ್ಥಳದಲ್ಲಿರದ ಕಾರಣ ಈ ಘಟನೆಯ ಕುರಿತು ಪೂರ್ಣ ಮಾಹಿತಿಗಳು ಇನ್ನು ಲಭ್ಯವಾಗಿಲ್ಲ.
ಆದರೆ ಈ ಘಟನೆಗೆ ಕಳಪೆ ಕಾಮಗಾರಿಯೇ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕಟ್ಟಡದ ಯೋಜನಾ ಕಾರ್ಯಗಳು ಸರಿಯಾಗಿಲ್ಲವೆಂದು ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. |