ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಕ್ರೈಸ್ತ ಸಮುದಾಯಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕ್ರಿಸ್ಮಸ್ ಚಹಾ ಕೂಟ ಏರ್ಪಡಿಸಿತ್ತು. ಎಂದಿನಂತೆ ಬಿಳಿ ಸಫಾರಿಯಲ್ಲಿ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರೈಸ್ತ ಪಾದ್ರಿಗಳಿಗೆ, ಸನ್ಯಾಸಿನಿಯರಿಗೆ ಹಲೋ.. ಎಂದು ಕೈ ಕುಲುಕಿ ಫೋಟೋಗೆ ಫೋಸ್ ನೀಡಿದರು.
ರಾಜ್ಯದಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ನಡೆದಿದ್ದ ದಾಳಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಹೊಸ ಅರ್ಥ ಬಂದಿತ್ತು. ಇದೊಂದು ಸೌಹಾರ್ದ ಚಹಾಕೂಟ. ನಾವು ಭಿನ್ನಮತ ತೊರೆದು ಒಂದಾಗಬೇಕಿದೆ. ಜತೆಗೂಡಿ ನಾಡನ್ನು ಕಟ್ಟೋಣ ಎಂದು ಮುಖ್ಯಮಂತ್ರಿ ಶಾಂತಿ ಸಂದೇಶ ಸಾರಿದರು.
ಈ ಎಲ್ಲ ಕಾರ್ಯಕ್ರಮದ ಉಸ್ತುವಾರಿ ವಹಿಸಿದ ಶಾಸಕ ಡೆರಿಕ್ ಫಿಲಿನ್ ಫಾ, ಮದುವೆ ಮನೆಯ ಸಿದ್ಧತೆಯ ಓಡಾಟದಂತೆ ಚುರುಕಾಗಿದ್ದರು. ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಹೊಸ ಶಕೆ ಆರಂಭಿಸಿದ್ದಾರೆ ಎಂದು ಅವರು ಹೇಳಿದರು.
ಹಿಂದೆ ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಂಡಿದ್ದ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ಚಹಾಕೂಟಕ್ಕೆ ಆಗಮಿಸಿರಲಿಲ್ಲ. ಅವರ ಪರವಾಗಿ ಗ್ರೆಗರಿ ಮರಿಯಪ್ಪ ಸಿ.ಫ್ರಾನ್ಸಿಸ್ ಭಾಗವಹಿಸಿದ್ದರು. ಸಭಾಪತಿ ವೀರಣ್ಣ ಮತ್ತಿಕಟ್ಟೆ, ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಹಾಗೂ ಕ್ರೈಸ್ತ ಸಮುದಾಯದ ಪ್ರಮುಖರು ಭಾಗವಹಿಸಿದ್ದರು. |