ಜನವರಿ ಒಂದರಿಂದ ರಾಜ್ಯದ ಸರ್ಕಾರಿ ವಾಹನಗಳ ನೋಂದಣಿ ಸಂಖ್ಯಾ ಫಲಕ ಕನ್ನಡದಲ್ಲಿರಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ನೀಡಿರುವ ಸೂಚನೆಯನ್ನು ಅನುಷ್ಠಾನಕ್ಕೆ ತರಲು ಕನ್ನಡ ಅನುಷ್ಠಾನ ಮಂಡಳಿ ಮುಂದಾಗಿದೆ.
ಕನ್ನಡ ಅನುಷ್ಠಾನ ಮಂಡಳಿ ಕನ್ನಡದಲ್ಲಿ ನೋಂದಣಿ ಸಂಖ್ಯೆ ಮುದ್ರಿಸದ ಸರ್ಕಾರಿ ವಾಹನಗಳ ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ಕೈಗೊಳ್ಳಲಿದೆ,
ಜನವರಿ 1ರ ನಂತರವೂ ಕನ್ನಡದಲ್ಲಿ ನಾಮಫಲಕಗಳಿರದ ಸರ್ಕಾರಿ ವಾಹನಗಳಿಗೆ ಮಸಿ ಬಳಿಯಲಾಗುವುದು ಎಂದು ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಆರ್.ಎ.ಪ್ರಸಾದ್ ತಿಳಿಸಿದ್ದಾರೆ. ಕಳೆದ 12 ವರ್ಷಗಳಿಂಸ ವಾಹನಗಳಿಗೆ ಕನ್ನಡದಲ್ಲಿ ನೋಂದಣಿ ಫಲಕಗಳನ್ನು ಉಚಿತವಾಗಿ ಬರೆಯುವ ಕಾಯಕದಲ್ಲಿ ತೊಡಗಿರುವ ಅನುಷ್ಠಾನ ಮಂಡಳಿ ಡಿ.28 ರಿಂದ ಕನ್ನಡ ಅಂಕಿ ಬಳಕೆ ಸಪ್ತಾಹ ಕೂಡಾ ಆಯೋಜಿಸಿದೆ. ಈವರೆಗೆ ಸುಮಾರು 25 ಸಾವಿರ ವಾಹನಗಳಿಗೆ ಕನ್ನಡದಲ್ಲಿ ನೋಂದಣಿ ಸಂಖ್ಯೆ ಬರೆಯಲಾಗಿದೆ ಎನ್ನುತ್ತಾರೆ ಪ್ರಸಾದ್.
ಕನ್ನಡ ಅನುಷ್ಠಾನ ಮಂಡಳಿ ಒತ್ತಾಯದ ಮೇರೆಗೆ ಸಾರಿಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗಳು ಮತ್ತು ಆಡಳಿತ ಸುಧಾರಣೆ ಇಲಾಖೆಗಳು 2000ರಲ್ಲಿ ಪ್ರತ್ಯೇಕವಾಗಿ ಎರಡು ಆದೇಶ ಹೊರಡಿಸಿವೆ. ಆದೇಶದಲ್ಲಿ ಖಾಸಗಿ ವಾಹನಗಳೂ ಕನ್ನಡದಲ್ಲಿ ನೋಂದಣಿ ಸಂಖ್ಯೆಯನ್ನು ಬರೆಸಬಹುದು, ಆದರೆ ಕಡ್ಡಾಯವಲ್ಲ ಎಂದಿದೆ. ಆದರೆ ಇದುವರೆಗೆ ಆದೇಶ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ.
ಸರ್ಕಾರದ ಈಗಿನ ಮುಖ್ಯ ಕಾರ್ಯದರ್ಶಿ ಇನ್ನೂ ತಮ್ಮ ಕಾರಿನ ನೋಂದಣಿ ಸಂಖ್ಯೆಯನ್ನು ಇಂಗ್ಲಿಷಿನಲ್ಲೇ ಬರೆಸಿಕೊಂಡಿದ್ದಾರೆ ಎಂದು ಪ್ರಸಾದ್ ದೂರಿದ್ದಾರೆ.
|