ಹನುಮಂತನಗರ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಸೇರಿದಂತೆ 6 ಜನರನ್ನು ಅಮಾನತುಗೊಳಿಸುವಂತೆ ನಗರ ಪೊಲೀಸ್ ಆಯುಕ್ತ ಶಂಕರ ಮಹಾದೇವ ಬಿದರಿ ಆದೇಶ ನೀಡಿದ್ದಾರೆ.
ಡಿ.25ರಂದು ಕಾಳಿದಾಸ ಲೇಔಟ್ ಬಳಿ ಕಾಯಿನ್ ಬೂತ್‌ನಿಂದ ನಾಣ್ಯ ಕದ್ದ ಆರೋಪದ ಮೇಲೆ ಸಿಕ್ಕಿ ಬಿದ್ದಿದ್ದ ಭಾಸ್ಕರ್ (27) ಠಾಣೆಯಲ್ಲಿ ನಿಗೂಢ ರೀತಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಅವರ ನಿರ್ಲಕ್ಷ್ಯ ಹಾಗೂ ದುರ್ನಡತೆ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ಸ್‌ಪೆಕ್ಟರ್ ಸೇರಿದಂತೆ ಪಿಎಸ್ಐ ಪಿ.ಶ್ರೀನಿವಾಸ್, ಎಎಸ್ಐ ಚಿಕ್ಕಣ್ಣ, ಪೇದೆಗಳಾದ ಚನ್ನಯ್ಯ, ಅಂಬರೀಷ್ ಹಾಗೂ ಶಿವಲಿಂಗತ್ಯ ಎಂಬುವರನ್ನು ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ವಿಚಾರಣೆ ನಡೆಸಲು ಕೇಂದ್ರ ವಿಭಾಗದ ಡಿಸಿಪಿ ಡಾ. ರಮೇಶ್ ಅವರಿಗೆ ಸೂಚಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ಬಿದರಿ ತಿಳಿಸಿದ್ದಾರೆ.
|