ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ, ಮಧುಗಿರಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಎಚ್‌ಡಿಕೆ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಆಯೋಗ ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರಿಗೆ ನೋಟಿಸ್ ಕಳುಹಿಸಲಾಗಿದೆ.
ಅಲ್ಲದೆ, ನೋಟಿಸ್‌ಗೆ ಶೀಘ್ರವೇ ಉತ್ತರ ನೀಡುವಂತೆ ಆಯೋಗ ಸೂಚನೆ ನೀಡಿದೆ. ಈ ಕುರಿತು ಕುಮಾರಸ್ವಾಮಿ ಅವರ ಉತ್ತರವನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಉನ್ನತ ಮೂಲಗಳು ತಿಳಿಸಿವೆ.
ಬಹಿರಂಗ ಪ್ರಚಾರದ ಬಳಿಕ ಆಯಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತಿಲ್ಲ ಎಂಬುದು ಕಾನೂನು. ಆದರೆ ಇದನ್ನು ಲೆಕ್ಕಿಸದ ಕುಮಾರಸ್ವಾಮಿ ಅವರು ಮಾಜಿ ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಮಧುಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಜಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಭೇಟಿಯ ವಿರುದ್ಧ ಆಯೋಗ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಯೋಗವು ನೋಟಿಸ್ ಜಾರಿ ಮಾಡಿದೆ. |