ಹುಕ್ಕೇರಿ ಉಪಚುನಾವಣೆಯಲ್ಲಿನ ಅಭ್ಯರ್ಥಿಗಳ ಹಣೆಬರಹ ದಾಖಲಾಗಿರುವ ಮತಯಂತ್ರಗಳನ್ನು ಬೆಳಗಾವಿಗೆ ಸಾಗಿಸುತ್ತಿದ್ದ ವೇಳೆ ಸಾರಿಗೆ ಸಂಸ್ಥೆಯ ಬಸ್ ಮಗುಚಿ ಬಿದ್ದ ಘಟನೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ಈ ಘಟನೆಯ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದ್ದು, ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಮತಯಂತ್ರಗಳನ್ನು ಬದಲಾಯಿಸುವ ಸಾಧ್ಯತೆ ಇರುವುದಾಗಿ ದೂರಿದ್ದಾರೆ.
ಬಸ್ ಅಪಘಾತದ ಬಗ್ಗೆ ಸಂಶಯವಿದೆ. ಮತಯಂತ್ರ ಬದಲಿಸಿರುವ ಸಾಧ್ಯತೆಯಿದ್ದು, ಈ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸುವಂತೆ ಕೆಪಿಸಿಸಿ ಕಾರ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಯವರು ಅಪಘಾತದ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ ಬಳಿಕ ಮರು ಚುನಾವಣೆ ನಡೆಸುವುದಿಲ್ಲವೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ತಿಳಿಸಿದ್ದಾರೆ. ಆದರೆ ಇವರ ಹೇಳಿಕೆಯ ಬಗ್ಗೆ ರಾಜಕೀಯ ಪಕ್ಷಗಳು ಅತೃಪ್ತಿ ವ್ಯಕ್ತಪಡಿಸಿದೆ.
ಘಟನೆ ನಡೆದಿದ್ದು ಹೀಗೆ:
ಹುಕ್ಕೇರಿ ಉಪಚುನಾವಣೆಯ ಮತಯಂತ್ರಗಳನ್ನು ಬಸ್‌ನಲ್ಲಿ ತರಲಾಗುತ್ತಿತ್ತು. ಬೆಳಗಾವಿ ಸಮೀಪದ ಸುತಗಟ್ಟಿ ಕ್ರಾಸ್ ಬಳಿ ಬಸ್ ಮಗುಚಿ ಬಿದ್ದಿದೆ. ಈ ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದು, ಎಂಟು ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ.
ಆದರೆ ಕೆಲವು ಮೂಲಗಳ ಪ್ರಕಾರ ಬಸ್ ಚಾಲಕನಿಗೆ ಪ್ರಯಾಣದ ವೇಳೆ ಪ್ರಜ್ಞಾಹೀನನಾದ. ಇದಕ್ಕೆ ಈತನಿಗೆ ಮೂರ್ಛೆ ರೋಗ ಕಾರಣ ಎನ್ನಲಾಗಿದೆ.ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಉರುಳಿಬಿತ್ತು. ಇದರ ಪರಿಣಾಮ ಮತಪೆಟ್ಟಿಗೆಗೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ತಮ್ಮ ವಾಹನದ ಮೂಲಕ ಮತಯಂತ್ರಗಳನ್ನು ಮರಾಠಾ ಮಂಡಲ ಪಾಲಿಟೆಕ್ನಿಕ್ ನ ಎಣಿಕೆ ಕೇಂದ್ರಕ್ಕೆ ಸಾಗಿಸಿದರು. |