ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸೇನಾ ಬ್ರಿಗೇಡಿಯರ್ ಮನೆಯ ಕಾಂಪೌಂಡ್ ಒಳಗೆ ನುಗ್ಗಿದ ವಿದ್ಯಾರ್ಥಿಯೊಬ್ಬನ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಆತ ಮೃತಪಟ್ಟ ಘಟನೆ ನಗರದ ಎಚ್ಎಎಲ್ ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.
ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾದ ವಿದ್ಯಾರ್ಥಿ ಮಹಮ್ಮದ್ ಮುಕ್ರಂ ಪಾಷಾ (19) ಎಂದು ಗುರುತಿಸಲಾಗಿದೆ. ಪಾಷಾ ಬಾಲ್ಡ್‌ವಿನ್ ಮೆಥಡಿಸ್ಟ್ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಯಾಗಿದ್ದ.
ಮಹಮ್ಮದ್ ಮತ್ತು ಆತನ ಸ್ನೇಹಿತ ಶನಿವಾರ ಮಧ್ಯರಾತ್ರಿ ತಮ್ಮ ಬೈಕಿನಲ್ಲಿ ಹಳೆ ಮದ್ರಾಸ್ ರಸ್ತೆಯಿಂದ ಎಚ್ಎಎಲ್ ರಸ್ತೆಯತ್ತ ಡ್ರಾಗ್ ರೇಸ್ ಮಾಡಿ ಬರುತ್ತಿದ್ದ ವೇಳೆ, ಸಂಚಾರಿ ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಬೈಕ್ ನಿಲ್ಲಿಸದೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ, ಬೈಕ್‌ನಿಂದ ಕೆಳಬಿದ್ದಿದ್ದರು. ಆಗ ಬೈಕ್ ಬಿಟ್ಟು ಓಡಿ ಹೋಗಿದ್ದರು.
ಈ ಸಂದರ್ಭದಲ್ಲಿ ಮಹಮ್ಮದ್ ಸೇನಾ ಬ್ರಿಗೇಡಿಯರ್ ಪಿ.ಎಸ್.ರವೀಂದ್ರನಾಥ ಅವರ ಮನೆಯ ಕಾಂಪೌಂಡ್ ಒಳಗೆ ಹಾರಿದ್ದ, ಆಗ ಸೇನಾ ಸಿಬ್ಬಂದಿ ಹಾರಿಸಿದ ಗುಂಡಿಗೆ ಬಲಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಆದೇಶ: ಬ್ರಿಗೇಡಿಯರ್ ನಿವಾಸದ ಕಾಂಪೌಂಡ್‌ನೊಳಕ್ಕೆ ಅಕ್ರಮವಾಗಿ ನುಸುಳಿ, ಸೇನಾ ಸಿಬ್ಬಂದಿಯ ಗುಂಡಿಗೆ ಬಲಿಯಾದ ವಿದ್ಯಾರ್ಥಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನೆ ತನಿಖೆಗೆ ಆದೇಶಿಸಿದೆ. |