ಅಪರಾಧಿಗಳಿಂದ ಸತ್ಯವನ್ನು ಬಯಲಿಗೆಳೆಯಲು ನಡೆಸುವ ಮಿದುಳು ವಿಶ್ಲೇಷಣೆ, ಮಂಪರು ಪರೀಕ್ಷೆ ಹಾಗೂ ಸುಳ್ಳು ಪತ್ತೆ ಪರೀಕ್ಷೆಯಿಂದ ಯಾವುದೇ ಮಾನವ ಹಕ್ಕು ಉಲ್ಲಂಘನೆ ಆಗುವುದಿಲ್ಲ ಎಂದು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ ಮಾಲಿನಿ ಅವರು ತಿಳಿಸಿದ್ದಾರೆ.
ಅವರು ಗುಲ್ಬರ್ಗದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಶೇಠ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಪರು ಪರೀಕ್ಷೆ, ಸುಳ್ಳು ಪತ್ತೆ ಪರೀಕ್ಷೆಯ ವೇಳೆಯಲ್ಲಿ ಬಯಲಾದ ನೈಜಾಂಶಗಳನ್ನು ಸರ್ವೋಚ್ಚನ್ಯಾಯಾಲ ಕೂಡ ನ್ಯಾಯದಾನ ವೇಳೆಯಲ್ಲಿ ಗಣನೆಗೆ ತೆಗೆದುಕೊಳ್ಳುತ್ತದೆ ಎಂದ ಅವರು, ಒಂದು ವೇಳೆ ಈ ಪರೀಕ್ಷೆಗಳಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದಾದಲ್ಲಿ ಈ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಅದಕ್ಕೆ ಅವಕಾಶ ನಿರಾಕರಿಸುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆ ನಿಟ್ಟಿನಲ್ಲಿ ಉಗ್ರರು, ಭಯೋತ್ಪಾದಕರು ಹಾಗೂ ಅಪರಾಧಿಗಳ ಮೇಲೆ ನಡೆಸಲಾಗುವ ಈ ಪರೀಕ್ಷೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದರಲ್ಲಿ ಹುರುಳಿಲ್ಲ ಎಂದು ಹೇಳಿದರು. |