ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಚುನಾವಣಾ ಫಲಿತಾಂಶ ಮಂಗಳವಾರ ಹೊರಬೀಳಲಿದ್ದು, ಇದೀಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.
ಫಲಿತಾಂಶ ಇಂದು ಮಧ್ನಾಹ್ನದೊಳಗೆ ಹೊರಬೀಳುವ ಸಾಧ್ಯತೆ ಇದೆ. ಎಂಟು ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ.74.43ರಷ್ಟು ಮತದಾನವಾಗಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮತಎಣಿಕೆ ಆಯಾ ಜಿಲ್ಲಾಕೇಂದ್ರಗಳಲ್ಲಿ ನಡೆಯಲಿದ್ದು, ಮಂಗಳವಾರ ಬೆಳಿಗ್ಗೆ 8ಗಂಟೆಗೆ ಮತಎಣಿಕೆ ಆರಂಭವಾಗಿದೆ. ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಮಧುಗಿರಿ ಕ್ಷೇತ್ರ ಸೇರಿದಂತೆ ಹುಕ್ಕೇರಿ, ದೊಡ್ಡಬಳ್ಳಾಪುರ, ತುರುವೇಕೆರೆ, ಅರಭಾವಿ,ಕಾರವಾರ,ಮದ್ದೂರು,ದೇವದುರ್ಗ ಕ್ಷೇತ್ರಕ್ಕೆ ಶನಿವಾರ ಚುನಾವಣೆ ನಡೆದಿತ್ತು.
ಇದೀಗ ಎಲ್ಲೆಡೆ ಗೆಲುವಿನ ಲೆಕ್ಕಚಾರದ ಮಾತುಕತೆ ನಡೆದಿದೆ, ರಾಜಕೀಯ ಪಕ್ಷಗಳಂತೂ ಎಂಟು ಸೀಟುಗಳು ತಮ್ಮ ತೆಕ್ಕಗೆ ಬೀಳಲಿದೆ ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಆಶಾಭಾವ ವ್ಯಕ್ತಪಡಿಸುತ್ತಿದೆ. ಆದರೆ ಮತದಾರ ಪ್ರಭು ಯಾರನ್ನು ಆಶೀರ್ವದಿಸಿದ್ದಾನೆ ಎಂಬುದು ಇಂದು ಬಹಿರಂಗಗೊಳ್ಳುವ ಮೂಲಕ, ಅನಿತಾಕುಮಾರಸ್ವಾಮಿ, ಚೆನ್ನಿಗಪ್ಪ, ಅಸ್ನೋಟಿಕರ್, ರಾಜಣ್ಣ ಸೇರಿದಂತೆ ಪ್ರಮುಖರ ಹಣೆಬರಹ ನಿರ್ಧಾರವಾಗಲಿದೆ. |