ಇಂಚಗೇರಿ ಮಠದ ಆಸ್ತಿ ವಿವಾದ ಸಂಬಂಧ ನಡೆದ ಹತ್ಯಾಕಾಂಡ ಪ್ರಕರಣದ 44ಮಂದಿ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಬಿಜಾಪುರ ಇಂಚಗೇರಿ ಮಠದ ಆಸ್ತಿ ಮತ್ತು ಟ್ರಸ್ಟ್ ವಿವಾದದಲ್ಲಿ 1996ರಂದು ಐದು ಮಂದಿಯನ್ನು ಹತ್ಯೆಗೈಯಲಾಗಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ಊರವರು ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಘಟನೆಯ ಕುರಿತು ಸುಭಾಶ್ ಎನ್ನುವವರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಳೆದ 12ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಇಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಸಿರಿಯಣ್ಣನವರ್, ಪ್ರಕರಣದ ಕುರಿತು ಸರಿಯಾದ ಸಾಕ್ಷ್ಯಾಧಾರ ಇಲ್ಲದ ಕಾರಣ 44 ಆರೋಪಿಗಳನ್ನು ಖುಲಾಸೆಗೊಳಿಸಿರುವುದಾಗಿ ಹೇಳಿದರು.
5ಮಂದಿ ಹತ್ಯೆ ಪ್ರಕರಣದಲ್ಲಿ ಒಟ್ಟು 47ಮಂದಿ ವಿರುದ್ದ ಆರೋಪಪಟ್ಟಿ ದಾಖಲಾಗಿತ್ತು. ಆದರೆ ವಿಚಾರಣೆ ವೇಳೆಯೇ ಮೂರು ಮಂದಿ ಸಾವನ್ನಪ್ಪಿದ್ದರು. ಆರೋಪಿತರ ವಿರುದ್ಧ ಸರಿಯಾದ ಸಾಕ್ಷಿ ಹೇಳದ ಕಾರಣ ಖುಲಾಸೆಗೊಂಡಿರುವುದು ಪ್ರಕರಣಕ್ಕೆ ನ್ಯಾಯ ದೊರಕಿದಂತಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. |