ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್ ಪಾಳಯ ಸೇರಿದ್ದ ಅಹಿಂದ ನಾಯಕ ಸಿದ್ದರಾಮಯ್ಯ ಅವರು ಈ ಬಾರಿ ಉಪಚುನಾವಣೆಯ ಪ್ರಚಾರ ಕಾರ್ಯಕ್ಕೆ ತೆರಳದೆ ತಟಸ್ಥವಾಗಿ ಉಳಿದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷೆ ಡಿಕೆಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ,ಸಿದ್ದರಾಮಯ್ಯ ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರು ಎಂದು ಕಿಡಿಕಾರಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪಕ್ಷದ 123ನೇ ವರ್ಷಾಚರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ವ್ಯಕ್ತಿ ಕೇಂದ್ರಿತವಲ್ಲ, ಕಾಂಗ್ರೆಸ್‌ಗೆ ಕಾರ್ಯಕರ್ತರೆ ಜೀವಾಳ. ಇದು ನಾಯಕರ ಪಕ್ಷವಲ್ಲ. ಆ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ಕಾರ್ಯಕ್ಕೆ ಬಂದಿಲ್ಲ ಎಂಬ ಕಾರಣಕ್ಕೆ ಪಕ್ಷಕ್ಕೆ ಯಾವ ನಷ್ಟವೂ ಆಗುವುದಿಲ್ಲ ಎಂದು ಹೇಳಿದರು.ಪಕ್ಷದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದೇ ತಟಸ್ಥವಾಗಿರುವ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಭವಿಷ್ಯದ ಬಗ್ಗೆ ಯಾವ ತೆರನಾದ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಒಂದಲ್ಲ ಒಂದು ಕಾರಣದಿಂದ ಕಾಂಗ್ರೆಸ್ ಸಖ್ಯದಿಂದ ದೂರ ಸರಿಯುತ್ತಿರುವ ಸಿದ್ದರಾಮಯ್ಯ ಮಾತ್ರ, ತನ್ನ ಗೈರು ಹಾಜರಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದೇ ಸಬೂಬು ಹೇಳುತ್ತಾ ಬಂದಿದ್ದಾರೆ. ಆದರೆ ಈ ಬಾರಿಯ ಗೈರು ಹಾಜರಿ ಅವರ ಅಸಮಾಧಾನ ಮತ್ತಷ್ಟು ಎತ್ತಿತೋರಿಸುವ ಮೂಲಕ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಆಪ್ತರ ಪಾಳಯದಲ್ಲಿ ಮತ್ತಷ್ಟು ದೊಡ್ಡ ಕಂದಕವನ್ನು ನಿರ್ಮಿಸಿರುವುದು ಸುಳ್ಳಲ್ಲ. |