ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಂಬಂಧ ತಮಿಳುನಾಡು ಹೈಕೋರ್ಟ್ ಮುಂದೆ ರಿಟ್ ಅರ್ಜಿ ಇರುವಾಗ ಸಂಭ್ರಮಪಡುವುದು ಎಷ್ಟು ಸರಿ. ರಾಜ್ಯ ಸರ್ಕಾರ ಜನರನ್ನು ಭ್ರಮೆಯಲ್ಲಿ ತಳ್ಳಿ ಎಚ್ಚರರಹಿತ ವರ್ತನೆ ತೋರುತ್ತಿದೆ ಎಂದು ಹನುಮಂತರಾಯಪ್ಪ ಆಪಾದಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ಶಾಸಕರ ಸಭಾಂಗಣದಲ್ಲಿ ಏರ್ಪಡಿಸಿದ್ದ `ಕನ್ನಡ ಶಾಸ್ತ್ರೀಯ ಭಾಷೆಯಾಯ್ತೆ-ಇಲ್ಲವೆ' ಚಿಂತನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ತಮಿಳುನಾಡು ಹೈಕೋರ್ಟ್‌ನಲ್ಲಿರುವ ರಿಟ್ ಅರ್ಜಿ ಅಂಗೀಕಾರವಾದರೆ, ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಕ್ರಮಗಳು ಏನು ಎಂಬುದು ಮುಖ್ಯ. ಆದರೆ ಅದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿಕೊಂಡು ಪಲಾಯನವಾದ ಅನುಸರಿಸಿದರೆ ರಾಜ್ಯದ ಜನ ಕ್ಷಮಿಸುವುದಿಲ್ಲ ಎಂದರು.
ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನ ಘೋಷಿಸುವ ಸಂದರ್ಭದಲ್ಲಿಯೇ ರಿಟ್ ಅರ್ಜಿ ದಾಖಲಿಸಲಾಗಿತ್ತು. ಕೇಂದ್ರ ಸರ್ಕಾರ ಈ ಅರ್ಜಿಯನ್ನು ತೆರವುಗೊಳಿಸುವತ್ತ ಗಮನ ಹರಿಸದೆ ಘೋಷಣೆ ಹೊರಡಿಸಿದೆ. ಇದರಲ್ಲಿ ಕೇಂದ್ರದ ತಂತ್ರಗಾರಿಕೆ ಅಡಗಿರುವ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕಿದೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವಿ. ವೀರಣ್ಣ, ಖ್ಯಾತ ವಿಮರ್ಶಕ ಪ್ರೊ.ಕಿ.ರಂ. ನಾಗರಾಜ್ ಹಾಗೂ ಮಾಜಿ ಶಾಸಕ ಒಕ್ಕೂಟದ ಅಧ್ಯಕ್ಷ ಪ್ರಭಾಕರ್ ರೆಡ್ಡಿಯವರು ಈ ಸಂದರ್ಭದಲ್ಲಿ ಹಾಜರಿದ್ದರು. |