ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಸಾಧಿಸಿ, ಜೆಡಿಎಸ್ ಗೆಲುವು ಸಾಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಎಂ.ಡಿ.ಲಕ್ಷ್ಮೀನಾರಾಯಣ ಅವರು ಮತ ಎಣಿಕೆ ಕೇಂದ್ರದಲ್ಲಿ ಲಘು ಹೃದಯಾಘಾತಕ್ಕೆ ಒಳಗಾದ ಘಟನೆ ನಡೆದಿದೆ. ಇಲ್ಲಿ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಗೆಲುವಿನ ನಗು ಬೀರಿದ್ದಾರೆ.
ಮತಎಣಿಕೆ ಬೆಳಿಗ್ಗೆ ಆರಂಭಗೊಂಡಿದ್ದು, ಆರಂಭಿಕವಾಗಿ ಬಿಜೆಪಿಯ ಲಕ್ಷ್ಮೀನಾರಾಯಣ್ ಅವರೇ ಜಯಶಾಲಿ ಎಂದೇ ಹೇಳಲಾಗಿತ್ತು. ಆದರೆ ಅಂತಿಮ ಹಂತದ ಮತಎಣಿಕೆ ಆಗುತ್ತಿದ್ದಂತೆಯೇ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ತೀವ್ರ ನಿರಾಸೆಗೆ ಒಳಗಾಗುವಂತಾಗಿದೆ.
ಇದರೊಂದಿಗೆ ಜಯದ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಪಾಳಯದಲ್ಲಿ ಶೋಕದ ವಾತಾವರಣ ಮೂಡಿದೆ. ತುರುವೇಕೆರೆಯ ಸಿ.ಎಸ್.ಪುರ ಜೆಡಿಎಸ್‌ನ ಭದ್ರ ಕೋಟೆಯಾಗಿದ್ದು, ಇಲ್ಲಿನ ಮತ ಎಣಿಕೆ ವೇಳೆ ಬಿಜೆಪಿಗೆ ಉಲ್ಟಾ ಹೊಡೆದಿದೆ.
ಲಕ್ಷ್ಮೀನಾರಾಯಣ ಅವರನ್ನು ಇದೀಗ ತುಮಕೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಆಯೋಗಕ್ಕೆ ಮನವಿ: ತುರವೇಕೆರೆ ಕ್ಷೇತ್ರದಲ್ಲಿ ಮರುಮತದಾನ ನಡೆಸುವಂತೆ ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದು, ಅಲ್ಲಿಯವರೆಗೆ ಫಲಿತಾಂಶವನ್ನು ತಡೆಹಿಡಿಯಬೇಕು ಎಂದು ಕೋರಿದ್ದಾರೆ. |