ಮಂಡ್ಯದಲ್ಲಿ ಮಾಜಿ ಸಂಸದ ಹಾಗೂ ಬಿಜೆಪಿಯ ಮುಖಂಡ ಜಿ.ಮಾದೇಗೌಡ ಅವರ ಮೇಲೆ ಪಕ್ಷದ ಕಾರ್ಯಕರ್ತರೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಡ್ಯದ ಹೃದಯ ಭಾಗದಲ್ಲಿರುವ ಗಾಂಧಿ ಸ್ಮಾರಕದಲ್ಲಿ ಮಾದೇಗೌಡ ಇರುವುದನ್ನು ಅರಿತ ದುಷ್ಕರ್ಮಿಗಳು ಅವರನ್ನು ಹಿಗ್ಗಾಮುಗ್ಗ ಥಳಿಸಿ ಬಟ್ಟೆಬರೆಗಳನ್ನು ಹರಿದುಹಾಕಿದ್ದಾರೆ.
ಮದ್ದೂರು ಉಪಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಈ ಹಲ್ಲೆ ನಡೆದಿದ್ದು, ಈ ಹಲ್ಲೆಯನ್ನು ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಮದ್ದೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಈ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.
ಪ್ರತಿಭಟನೆ:
ಮಾದೇಗೌಡರ ಮೇಲೆ ಹಲ್ಲೆ ನಡೆದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಸಾಂತ್ವನ ಹೇಳಿರುವ ಮಾಜಿ ಸಚಿವ ಚಲುವರಾಯ ಸ್ವಾಮಿ ಮತ್ತು ಮಂಡ್ಯದ ಮಾಜಿ ಶಾಸಕ ಆತ್ಮಾನಂದ ಅವರು, ಈ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಮನೆ ಮುಂದೆ ಧರಣಿ: ದೇವೇಗೌಡ
ಮಾದೇಗೌಡರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಹಲ್ಲೆ ನಡೆದಿರುವುದು ದುರದೃಷ್ಟಕರ. ನಾಳೆ ಬೆಳಗ್ಗೆಯಷ್ಟರಲ್ಲಿ ದುಷ್ಕರ್ಮಿಗಳನ್ನು ಬಂಧಿಸದೇ ಹೋದಲ್ಲಿ ಯಡಿಯೂರಪ್ಪ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ. |