ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲು ರಾಜ್ಯದ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ನಾನಾ ಕಾರಣಗಳನ್ನು ನೀಡುತ್ತಿದ್ದರೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ಅವರು ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವರ್ತೂರು ಪ್ರಕಾಶ್, ಕಾಂಗ್ರೆಸ್ ವಿರುದ್ಧ ಕಿಡಿಕಾರುವುದನ್ನು ಮರೆಯಲಿಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಲ್ಲಿ ಮೂಲೆಗುಂಪು ಮಾಡಲಾಯಿತು. ಕಾಂಗ್ರೆಸ್‌ನಲ್ಲಿ ಸರಿಯಾದ ಸ್ಥಾನಮಾನಕ್ಕಾಗಿ ಕಾದ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದ ಪರಿಣಾಮ ಕಾಂಗ್ರೆಸ್ ಇಂದು ಸೋಲು ಅನುಭವಿಸುತ್ತಿದೆ ಎಂದರು.
ನರೇಂದ್ರಸ್ವಾಮಿ ವಿಶ್ವಾಸ:
ಪಕ್ಷೇತರ ಸಚಿವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೈಬಿಡುವುದಿಲ್ಲ ಎಂದು ಪಕ್ಷೇತರ ಶಾಸಕ, ಸಚಿವರೂ ಆಗಿರುವ ನರೇಂದ್ರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಪ್ರವಾಸದಲ್ಲಿರುವ ಅವರನ್ನು, ಉಪಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ಐದು ಸ್ಥಾನಗಳು ದೊರಕಿವೆ. ಪೂರ್ಣಪ್ರಮಾಣದ ಬಹುಮತ ಪಡೆದಿರುವ ಬಿಜೆಪಿ ಪಕ್ಷೇತರ ಸಚಿವರನ್ನು ಕೈಬಿಡುವ ಬಗ್ಗೆ ಗಮನ ಸೆಳೆದಾಗ, ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷೇತರ ಸಚಿವರನ್ನು ಕೈಬಿಡುವುದಿಲ್ಲವೆನ್ನುವ ವಿಶ್ವಾಸ ತಮಗಿದೆ ಎಂದಷ್ಟೇ ಉತ್ತರಿಸಿದರು. |