ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ ಹಾಗೂ ಪ್ರಚಾರ ಕಾರ್ಯದಿಂದ ದೂರ ಉಳಿದ ಮುಖಂಡರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ಕೆಪಿಸಿಸಿ ನಿರ್ಧರಿಸಿದೆ.
ಇದರಲ್ಲಿ ಪ್ರಮುಖವಾಗಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದರಾದ ಅಂಬರೀಷ್ ಹಾಗೂ ಆರ್.ಎಲ್.ಜಾಲಪ್ಪ ಅವರ ವಿರುದ್ಧ ದೂರು ನೀಡಲು ನಿರ್ಧರಿಸಿರುವುದಾಗಿ ಕೆಪಿಸಿಸಿ ಮೂಲಗಳು ತಿಳಿಸಿದೆ.
ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಇದ್ದುಕೊಂಡೇ ಪ್ರಚಾರಕ್ಕೆ ಬಾರದಿರುವುದು, ಅದರಿಂದಾದ ತೊಂದರೆ ಇತ್ಯಾದಿ ವಿಚಾರಗಳ ಬಗ್ಗೆ ಹೈಕಮಾಂಡ್‌ಗೆ ತಿಳಿಸಲು ಮುಂದಾಗಿರುವುದಾಗಿ ಹೇಳಿದೆ.
ಸಿದ್ದರಾಮಯ್ಯ ಬೆಂಬಲಿಗರು ಬಿಜೆಪಿಗೆ ಮತ ಚಲಾಯಿಸಿ ಎಂದು ಬಹಿರಂಗ ಹೇಳಿಕೆಗಳು ನೀಡಿದ್ದು ಕೂಡ ಟೀಕೆಗೆ ಒಳಗಾಗಿದ್ದು, ಅದರ ಪರಿಣಾಮ ಕೆಲವಡೆ ಕಾಂಗ್ರೆಸ್ ಸೋಲನ್ನನುಭವಿಸುವಂತಾಗಿದೆ.
ಮಂಡ್ಯದಲ್ಲಿ ಅಂಬರೀಷ್ ಅವರು ಸ್ವಂತ ಮದ್ದೂರು ತಾಲೂಕಿನ ಚುನಾವಣಾ ಪ್ರಚಾರಕ್ಕೆ ಗೈರು ಹಾಜರಾಗಿದ್ದರು, ಇನ್ನು ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಸಂಸದ ಜಾಲಪ್ಪ ಅವರು ಕೂಡ ಬಹಿರಂಗವಾಗಿ ಪ್ರಚಾರಕ್ಕೆ ಬರದೆ, ಪರೋಕ್ಷವಾಗಿ ತಮ್ಮ ಪುತ್ರ ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಪರ ಕೆಲಸ ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಆರೋಪಿಸಿದ್ದಾರೆ. |