ಉಪ ಚುನಾವಣೆಯ ಶೂನ್ಯ ಸಂಪಾದನೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ‌್ ತುರ್ತು ಬುಲಾವ್ ಬಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಬುಧವಾರಬೆಳಗ್ಗೆ ದೆಹಲಿಗೆ ತೆರಳಿದರೆ, ದೇಶಪಾಂಡೆ ಮಧ್ಯಾಹ್ನದ ನಂತರ ದೆಹಲಿಗೆ ತೆರಳಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ್ ಚವಾಣ್ ಕರೆ ಆಧರಿಸಿ ಈ ಇಬ್ಬರು ಗುರುವಾರ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದು, ಸೋನಿಯಾ ಗಾಂಧಿಯನ್ನು ಭೇಟಿಯಾಗುವ ಬಗ್ಗೆ ಇನ್ನೂ ಖಚಿತವಾಗಿಲ್ಲ.
ಸಿದ್ದರಾಮಯ್ಯ ಅವರಿಗೆ ಪುನರ್ಜನ್ಮ ನೀಡಿದ್ದೇ ಕಾಂಗ್ರೆಸ್. ಅವರಿಗೋಸ್ಕರ ಧರ್ಮಸಿಂಗ್ ನೇತೃತ್ವದ ಸರ್ಕಾರವನ್ನೂ ಕಳೆದುಕೊಂಡೆವು.ಆದರೂ ಪ್ರಚಾರಕ್ಕೆ ಬರಲಿಲ್ಲ ಎಂಬ ನೋವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ತಿಳಿಸಿದರು.
ಹಿಂದೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ಪಕ್ಷದ ಮುಖಂಡರು ಹಗಲು ರಾತ್ರಿ ಎನ್ನದೆ ಶ್ರಮಿಸಿ ಅವರನ್ನು ಗೆಲ್ಲಿಸಿದರು. ಇದು ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಕೊಟ್ಟ ಪುನರ್ಜನ್ಮವಲ್ಲವೇ ಎಂದು ಅವರು ಪ್ರಶ್ನಿಸಿದರು. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ಮೇಲೆ ಮತ್ತೆ ಪ್ರಚಾರಕ್ಕೆ ಬನ್ನಿ ಎಂದು ಸೋನಿಯಾ ಕರೆಯಬೇಕೆಂದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.
|