ಎಲ್‌ಪಿಜಿ ಗ್ಯಾಸ್ ಟ್ಯಾಂಕರ್‌ಗಳ ಸಾಗಣೆ ಬಾಡಿಗೆ ದರವನ್ನು ಏರಿಸಲು ಗ್ಯಾಸ್ ಕಂಪೆನಿಗಳು ಒಪ್ಪದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿಯಿಂದಲೇ ಗ್ಯಾಸ್ ಟ್ಯಾಂಕರ್‌ಗಳು ಮುಷ್ಕರ ಆರಂಭಿಸಿದ್ದು, ರಾಜ್ಯ ಹಾಗೂ ನೆರೆ ರಾಜ್ಯಗಳಿಗೆ ಗ್ಯಾಸ್ ಸರಬರಾಜು ಸ್ಥಗಿತಗೊಳಿಸಿವೆ.
ಪ್ರಮುಖ ಗ್ಯಾಸ್ ಪೂರೈಕೆ ಕಂಪೆನಿಗಳು ಹಲವಾರು ವರ್ಷಗಳಿಂದ ಗ್ಯಾಸ್ ಟ್ಯಾಂಕರ್‌ಗಳ ಬಾಡಿಗೆ ದರವನ್ನು ಪರಿಷ್ಕರಿಸದಿರುವುದರಿಂದ ಗ್ಯಾಸ್ ಟ್ಯಾಂಕರ್ಗಳ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪ್ರಮುಖ ಗ್ಯಾಸ್ ಕಂಪೆನಿಗಳ ಜೊತೆಗೆ ನಡೆಸಿದ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಗ್ಯಾಸ್ ಸರಬರಾಜು ಮಾಡುತ್ತಿರುವ 3,500 ಎಲ್‌ಪಿಜಿ ಟ್ಯಾಂಕರ್‌ಗಳು ಮುಷ್ಕರ ನಡೆಸಿವೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಮಂಗಳೂರಿನಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಕೊಚ್ಚಿ, ಸೇಲಂ, ಪಾಂಡಿಚೇರಿ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಗ್ಯಾಸ್ ಸರಬರಾಜಾಗುತ್ತಿದ್ದು, ಸರ್ಕಾರ ಒಂದು ಕಿ.ಮೀಗೆ ಕೇವಲ 1.60 ರೂ. ನೀಡುತ್ತಿದೆ. ಆದರೆ ಕಿ.ಮೀಗೆ 2.95 ನೀಡಬೇಕೆಂದು ಲಾರಿ ಮಾಲೀಕರ ಒತ್ತಾಯ. ಆದರೆ ಕಂಪೆನಿಗಳು ಇದಕ್ಕೆ ಒಪ್ಪದೇ 1.89 ರೂ.ನೀಡುವುದಾಗಿ ತಿಳಿಸಿವೆ. ಇದರಿಂದ ಲಾರಿ ಮಾಲೀಕರು ಮುಷ್ಕರಕ್ಕಿಳಿದಿದ್ದಾರೆ. |