ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹೂಡಬೇಕೆಂದಿದ್ದ ಮಾನನಷ್ಟ ಮೊಕದ್ದಮೆ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇದು ದೇವೇಗೌಡರಿಗೆ ತನ್ನ ಹೊಸ ವರ್ಷದ ಗಿಫ್ಟ್ ಎಂದು ಹೇಳಿದ್ದಾರೆ.ಬೆಂಗಳೂರು-ಮೈಸೂರು ಕಾರಿಡಾರ್(ನೈಸ್ ಯೋಜನೆ)ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳಿಗೆ ವಿಧಿಸುತ್ತಿರುವ ಅಧಿಕ ಶುಲ್ಕದ ಕುರಿತು ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಅಲ್ಲದೇ ನೈಸ್‌ನ ಅಶೋಕ್ ಖೇಣಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಿಸಿತ್ತು.ಇದೀಗ ಉಪಚುನಾವಣೆಯ ಫಲಿತಾಂಶದ ಬಳಿಕ ದಿಢೀರನೆ,ಹೊಸ ವರ್ಷದ ಕೊಡುಗೆಯಾಗಿ ಗೌಡರ ವಿರುದ್ಧ ಹಾಕಬೇಕೆಂದಿದ್ದ ಮಾನನಷ್ಟ ಮೊಕದ್ದಮೆ ನಿರ್ಧಾರ ಕೈಬಿಟ್ಟಿರುವುದಾಗಿ ಹೇಳಿದ್ದು, ಈ ಚುನಾವಣೆಯಲ್ಲಿ ಜನರೇ ಗೌಡರ ಆರೋಪಕ್ಕೆ ತಕ್ಕ ಪಾಠ ಕಲಿಸಿರುವಾಗಿ ತಾವು ಯಾವುದೇ ಕಾನೂನು ಸಮರಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. |