ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ಕುರಿತು ಸರ್ಕಾರ ಮರು ಅಧಿಸೂಚನೆ ಹೊರಡಿಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ಜ.16ರಿಂದ ಆರಂಭಗೊಳ್ಳುವ ಅಧಿವೇಶನದಲ್ಲಿ ಮಹತ್ವದ ಕಲಾಪಗಳನ್ನೇ ಕೈ ಬಿಡಲಾಗಿದೆ. ಆ ಲೋಪಗಳನ್ನು ಸರ್ಕಾರ ತಕ್ಷಣವೇ ಸರಿಪಡಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುತ್ತಿರುವುದು ಸ್ವಾಗತ. ಆದರೆ, ಅದು ಕಾಟಾಚಾರವಾಗಬಾರದು. ಜ.6ಕ್ಕೆ ಅಧಿವೇಶನ ಆರಂಭಗೊಂಡರೂ ಉಪಯುಕ್ತ ಚರ್ಚೆಗೆ ಸಿಗುವ ಸಮಯ ಕೇವಲ ನಾಲ್ಕು ದಿನ. ಆ ದಿನಗಳಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನಸೆಳೆಯುವ ಸೂಚನೆ, ಅರ್ಧಗಂಟೆ ಚರ್ಚೆಗಳಂತಹ ಕಲಾಪ ನಡೆಯದು ಎಂದರೆ ಅಧಿವೇಶನದ ಉಪಯೋಗವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಸಿಬಿಐಗೆ ತನಿಖೆಗೆ ಒತ್ತಾಯ:
ಮಾಜಿ ಸಂಸದ ಜಿ.ಮಾದೇಗೌಡ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಖರ್ಗೆ ಆಗ್ರಹಿಸಿದ್ದಾರೆ. ಮಾದೇಗೌಡ ಹಾಗೂ ಅವರ ಮಕ್ಕಳು ಪಕ್ಷವನ್ನು ಬೆಂಬಲಿಸದಿರುವುದರಿಂದ ಹೀಗಾಗಿದೆ ಎಂದು ಬಿಜೆಪಿಯವರೇ ಹೇಳಿದ್ದಾರೆ. ಜತಗೆ ಆಡಳಿತ ಪಕ್ಷದವರೇ ಹಲ್ಲೆ ನಡೆಸಿರುವುದರಿಂದ ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ ಎಂದು ಶಂಕಿಸಿದರು. |