ಪ್ರಚಾರ ಕಾರ್ಯದಿಂದ ದೂರ ಸರಿದು ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಉಪ ಮುಖ್ಯಮಂತ್ರಿ ಅವರು ಹೊಸ ವರ್ಷದ ಸಂಭ್ರಮವನ್ನು ನೆರೆಯ ಕೇರಳದಲ್ಲಿ ಆಚರಿಸುವ ಮೂಲಕ ಇದೀಗ ಮೈಸೂರಿಗೆ ವಾಪಸಾಗುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಮೇಲೆ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಅವರು ಉಪಚುನಾವಣೆಯಲ್ಲಿ ಪ್ರಚಾರ ಕಾರ್ಯಕ್ಕೆ ತೆರಳದೆ,ಗೈರು ಹಾಜರಾಗಿದ್ದರು. ಅಲ್ಲದೇ ಅವರ ಬೆಂಬಲಿಗರು ಬಹಿರಂಗವಾಗಿಯೇ ಬಿಜೆಪಿಗೆ ಮತ ನೀಡುವಂತೆ ಹೇಳಿಕೆ ನೀಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆಯೊಂದಿಗೆ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು.
ಆ ನಿಟ್ಟಿನಲ್ಲಿ ಕಾಂಗ್ರೆಸ್ ಈಗ ಸಿದ್ದರಾಮಯ್ಯ ವಿರುದ್ಧ ಕಿಡಿಕಾರತೊಡಗಿದ್ದು, ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಿದೆ. ಏತನ್ಮಧ್ಯೆ ಸಿದ್ದರಾಮಯ್ಯ ಅವರು ಹೊಸ ಪಕ್ಷ ಕಟ್ಟಲಿದ್ದಾರೆಂಬ ಊಹಾಪೋಹ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
ಆದರೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಯವಿಟ್ಟು ನಾನೀಗ ನಿಮ್ಮ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಲಾರೆ. ಏನಿದ್ದರೂ ಜನವರಿ 5ರ ಬಳಿಕ ಎಲ್ಲದಕ್ಕೂ ಉತ್ತರ ನೀಡಲಿದ್ದೇನೆ ಎಂದು ಹೇಳುವ ಮೂಲಕ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದಾರೆ. |