ರಾಜ್ಯದ ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದೃಢ ಸಂಕಲ್ಪ ಮಾಡಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರ 2009ನ್ನು ಕನ್ನಡ ಅನುಷ್ಠಾನ ವರ್ಷವಾಗಿ ಆಚರಿಸಲು ನಿರ್ಧರಿಸಿದೆ.
ಅಸ್ತಿತ್ವದಲ್ಲಿರುವ ಕಾನೂನು, ಆದೇಶಗಳ ಮೂಲಕ ಆಡಳಿತದಲ್ಲಿ ಕನ್ನಡ ಅನುಷ್ಠಾನ ಜಾರಿಗೊಳಿಸುವುದು ಮತ್ತು ಕನ್ನಡ ಅನುಷ್ಠಾನ ವರ್ಷ ಆಚರಣೆಯ ಧ್ಯೇಯ. ಅದಕ್ಕಾಗಿ ಕನ್ನಡ ಅನುಷ್ಠಾನದಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಪಾತ್ರ ವಿವರಿಸುವ ದಾರಿ ದೀವಿಗೆಯನ್ನು ಪ್ರಾಧಿಕಾರ ಪ್ರಕಟಿಸಿದೆ. ಸಪ್ತ ಸೂತ್ರ ಆಧರಿಸಿ ಈ ಕೈಪಿಡಿ ಸಿದ್ಧಪಡಿಸಲಾಗಿದೆ.
ವರ್ಷದ ಮೊದಲ ದಿನವೇ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಪಿಡಿ ಬಿಡುಗಡೆ ಮಾಡಿದರು. ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸರ್ಕಾರ ಬದ್ಧವಿದೆ. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಸಹಿಸಲಾಗದು ಎಂಬ ಹೇಳಿಕೆಯನ್ನೇ ಪುನರುಚ್ಚರಿಸಿದರು.
ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕನ್ನಡ ಅನುಷ್ಠಾನದಲ್ಲಿ ಆಗಬೇಕಿರುವ ಅಂಶಗಳ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆದರು. ಕನ್ನಡ ಅನುಷ್ಠಾನ ಮತ್ತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಪ್ರಾಧಿಕಾರ ವರ್ಷವೀಡೀ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು. |