ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜತೆ ಕೈ ಜೋಡಿಸುವುದು ಒಳ್ಳೆಯದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಮಾಡಿದ್ದೇನೆ. ಒತ್ತಡವನ್ನೂ ಹೇರಿದ್ದೇನೆ. ಅವರ ಯಾವುದೇ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದ ಸಚಿವರು, ಸಿದ್ದರಾಮಯ್ಯ ನನ್ನ ಪಾಲಿಗೆ ಮಹಾನ್ ನಾಯಕ. ಅವರು ಬಿಜೆಪಿಗೆ ಸೇರಿದರೆ ತುಂಬು ಹೃದಯದ ಸ್ವಾಗತ ಕೋರುತ್ತೇನೆ ಎಂದರು.
ಯಡಿಯೂರಪ್ಪ ಅವರೊಂದಿಗೆ ಕೆಲಸ ಮಾಡುವುದು ಸಂತಸದ ವಿಷಯ. ಅವರು ನನ್ನ ಜಿಲ್ಲೆಯ ನಾಯಕರು. ಅವರಿಗಾಗಿ ಎಂಥ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು. ಬಿಜೆಪಿ ಬಹುಮತ ಸಾಧಿಸಿರುವ ಹಿನ್ನೆಲೆಯಲ್ಲಿ ಅಭದ್ರತೆ ಕಾಡಿಲ್ಲ.ಖಾತೆ ಬದಲಾವಣೆ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದಿಟ್ಟಿಲ್ಲ. ಬೇಷರತ್ ಬೆಂಬಲ ಕೊಟ್ಟ ಮೇಲೆ ಷರತ್ತಿನ ಪ್ರಶ್ನೆಯೇ ಇಲ್ಲ ಎಂದರು.
ಛಲವಾದಿ ಜನಾಂಗದ ಸಮಾವೇಶ ಜ.4 ರಂದು ಶಿವಮೊಗ್ಗದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದ್ದು, ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
|