ಅಂಗಡಿ ಮುಂಗಟ್ಟು ಮತ್ತು ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸುವುದು ಜ.2ರಿಂದಲೇ ಜಾರಿಗೆ ಬಂದಿದ್ದು, ಇದುವರೆಗೂ ಕನ್ನಡ ನಾಮಫಲಕ ಹಾಕದವರಿಗೆ ಒಂದು ವಾರ ಕಾಲಾವಕಾಶ ನೀಡಲಾಗುವುದು ಎಂದು ಐಟಿ-ಬಿಟಿ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದ್ದಾರೆ.
ಐಟಿ-ಬಿಟಿ ಸಂಸ್ಥೆಗಳು ಸೇರಿದಂತೆ ಯಾವುದೇ ಅಂಗಡಿ ಕಂಪೆನಿ ಇರಲಿ ಎಲ್ಲರೂ ಕನ್ನಡದಲ್ಲಿ ಸ್ವಷ್ಟವಾಗಿ ನಾಮಫಲಕ ಹಾಕಬೇಕು. ನಂತರ ಉಳಿದ ಭಾಷೆಯಲ್ಲಿ ಹಾಕಲು ಅಭ್ಯಂತರವಿಲ್ಲ ಎಂದು ಅವರು ತಿಳಿಸಿದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಹತ್ತು ಸಾವಿರ ರೂ.ಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಇದರ ಉಸ್ತುವಾರಿ ನೋಡಿಕೊಳ್ಳಲು ಕೇವಲ ಈ ಒಂದು ಇಲಾಖೆಯಿಂದಲೇ ಸಾಧ್ಯವಿಲ್ಲ. ಬೆಸ್ಕಾಂ, ಜಲಮಂಡಳಿ, ಬಿಬಿಎಂಪಿ, ಬಿಡಿಎಗೂ ಇದರ ಜವಾಬ್ದಾರಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸರ್ಕಾರಿ ವಾಹನಗಳಿಗೆ ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ನಂಬರ್ ಪ್ಲೇಟ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
|