ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಮಂಜೂರಾಗಿರುವ ಪ್ರಥಮ ದರ್ಜೆ ಕಾಲೇಜುಗಳ ಕಾಮಗಾರಿ ಕೈ ಬಿಟ್ಟಿರುವ ಸರಕಾರದ ಕ್ರಮದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ನಬಾರ್ಡ್ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳ ಪೈಕಿ 13 ಪ್ರಥಮ ದರ್ಜೆ ಕಾಲೇಜುಗಳ ಕಾಮಗಾರಿಯನ್ನು ಕೈ ಬಿಟ್ಟು ತಾರತಮ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದರು.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದಾರೆ. ಆಗಿರುವ ತಾರತಮ್ಯವನ್ನು ಹತ್ತು ದಿನಗಳಲ್ಲಿ ಸರಿಪಡಿಸಬೇಕು ಎಂದು ಆಗ್ರಹಿಸಿದರು. ರಾಜ್ಯದ 20 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ನಿರ್ಮಾಣಕ್ಕೆ 1,350 ಲಕ್ಷ ರೂ.ಗಳ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳು ಅನುಮೋದನೆ ನೀಡಲಾಗಿದೆ. ಹೀಗಿದ್ದರೂ ತ್ಯಾಮಗೊಂಡ್ಲು, ಹೆಬ್ಬೂರು, ಹಳೇಬಿಡು, ಹಳ್ಳಿ ಮೈಸೂರು, ರಿಪ್ಪನ್‌ಪೇಟೆ, ಮೊಸಳೆ ಹೊಸಹಳ್ಳಿ, ಪಡುವಲಹಿಪ್ಪೆ, ಬಿಡದಿ ಹಾಗೂ ಉದಯಪುರಗಳಲ್ಲಿನ ಕಾಲೇಜುಗಳ ಕಾಮಗಾರಿಯನ್ನು ಕೈ ಬಿಡಲಾಗಿದೆ. ಇವು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಸೇರಿದ ವಿಧಾನಸಭಾ ಕ್ಷೇತ್ರಗಳಾಗಿದ್ದರಿಂದ ಈ ತಾರತಮ್ಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಏಜೆಂಟರಂತೆ ವರ್ತಿಸಿರುವ ತುರುವೇಕೆರೆ ಚುನಾವಣಾಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ತುಮಕೂರು ಡಿಸಿ ಹಾಗೂ ಪೊಲಿಸ್ ವರಿಷ್ಠರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
|