ಜನವರಿ 17ರಂದು ಕೊಪ್ಪಳದಲ್ಲಿ ಶೋಷಿತ ವರ್ಗಗಳ ಸಮಾವೇಶ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ನಡೆಸಲು ಉದ್ದೇಶಿಸಿರುವ ಶೋಷಿತ ವರ್ಗಗಳ ಸಮಾವೇಶ ಅಹಿಂದಗೆ ಪರ್ಯಾಯವಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಶೋಷಿತರು ಎಲ್ಲಾ ವರ್ಗಗಳಲ್ಲಿ ಇದ್ದಾರೆ. ಅಂತವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರ ದನಿಯಾಗಿರುವ ಪಕ್ಷ ಸಂಘಟನೆಗಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆಯೇ ವಿನಃ, ಯಾವುದೇ ವ್ಯಕ್ತಿಯ ಶಕ್ತಿ ಕುಂದಿಸುವಂತಹ ಸಮಾವೇಶವಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸರಿಸಮಾನವಾದ ಶಕ್ತಿ ನಮ್ಮ ಜೆಡಿಎಸ್‌ಗೂ ಇದೆ ಎಂದು ತೋರಿಸಿಕೊಟ್ಟಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. |