ಉಡುಪಿ ಹಾಗೂ ಶಿವಮೊಗ್ಗ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಇಬ್ಬರು ಶಂಕಿತ ಉಗ್ರರಲ್ಲಿ ಓರ್ವನಾದ ಫೈರೋಜ್ ಶಿಕಾರಿಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಸಮೀಪವೇ ವಾಸ್ತವ್ಯ ಹೂಡಿರುವ ಅಂಶ ಬಯಲಾಗಿದೆ.
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಶಂಕಿತ ಉಗ್ರ ಫೈರೋಜ್‌ನನ್ನು ಬಂಧಿಸಿದ್ದು, ಈತನಿಗೆ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸಂರ್ಪಕ ಇದೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಫೈರೋಜ್ ಶಿಕಾರಿಪುರ ಪಟ್ಟಣದ ಹೊಸಕೇರಿಯ ನಿವಾಸಿಯಾಗಿದ್ದಾನೆ.
ದೆಹಲಿ, ಗುಜರಾತ್ ಸರಣಿ ಬಾಂಬ್ ಸ್ಫೋಟದ ಕುರಿತು ಮಹತ್ವದ ಸುಳಿವು ದೊರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಫೈರೋಜ್‌ನನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ.
ಬಂಧಿತ ಫೈರೋಜ್‌ನನ್ನು (24) ಇದೀಗ ರಹಸ್ಯ ಸ್ಥಳವೊಂದರಲ್ಲಿ ತೀವ್ರ ತನಿಖೆಗೆ ಒಳಪಡಿಸಲಾಗಿದೆ. ಮಾವನ ಮನೆಗೆಂದು ಹೆಬ್ರಿಗೆ ಬಂದಿದ್ದ ಸಂದರ್ಭದಲ್ಲಿ ಫೈರೋಜ್‌ನನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಸಿಮಿ ಸಂಘಟನೆಯ ಮುಖಂಡ ರಿಯಾಜ್ ಭಟ್ಕಳ ಕೂಡ ಕೆಲವು ತಿಂಗಳ ಹಿಂದೆ ಫೈರೋಜ್ ಮನೆಯಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗಿದೆ.
ಏತನ್ಮಧ್ಯೆ ತೌಫಿಕ್ ಎಂಬಾತನನ್ನೂ ಸೆರೆ ಹಿಡಿಯಲಾಗಿದ್ದು, ಈತ ಅಹಮದಾಬಾದ್ ಸ್ಫೋಟ ಪ್ರಕರಣದ ರೂವಾರಿ ಇಂಡಿಯನ್ ಮುಜಾಹಿದೀನ್ ಪ್ರಮುಖ ಕಪಾಡಿಯ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. |