ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಜಾಡು ಹಿಡಿದಿರುವ ಪೊಲೀಸರಿಗೆ ಇದೀಗ ಅನೇಕ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು, ಮೋಸ್ಟ್ ವಾಂಟೆಡ್ ಉಗ್ರ ಭಟ್ಕಳದ ರಿಯಾಜ್ ಮುಂಬೈ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.
ಮುಂಬೈಗೆ ಉಗ್ರರನ್ನು ಕರೆದೊಯ್ಯಲು ಮಲ್ಪೆಯಲ್ಲಿ ಬೋಟ್ ಖರೀದಿಸಲು ರಿಯಾಜ್ ಯತ್ನಿಸಿದ್ದ ಎನ್ನಲಾಗಿದ್ದು, ಇದರಲ್ಲಿ ನಾಲ್ವರು ಉಗ್ರರೂ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಬೋಟ್ ಮಾಲೀಕರೊಂದಿಗೆ ಚರ್ಚೆ ಕೂಡ ನಡೆಸಿದ್ದರು. ಈ ಸಂದರ್ಭದಲ್ಲಿ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದರೂ, ಇವರಿಂದ ಮುಂಬೈ ಸ್ಫೋಟದ ಕುರಿತು ಯಾವುದೇ ಮಾಹಿತಿ ದೊರೆತಿರಲಿಲ್ಲ. ಒಂದು ವೇಳೆ ಆ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದರೆ, ಮುಂಬೈ ಸ್ಫೋಟವನ್ನು ತಪ್ಪಿಸಬಹುದಾಗಿತ್ತು ಎನ್ನಲಾಗಿದೆ.
ನಂ.26ರಂದು ನಡೆದ ಮುಂಬೈ ಸ್ಫೋಟಕ್ಕೆ ರಿಯಾಜ್ ಹಾಗೂ ಆತನ ಸಹೋದರ ಅಗಸ್ಟ್‌ನಲ್ಲೇ ಸ್ಕೆಚ್ ರೂಪಿಸಿದ್ದರು. ಇದಕ್ಕೆ ಸಹಕಾರಿಯಾಗಿದ್ದ ಶಂಕಿತ ಉಗ್ರರಾದ ಅಹಮ್ಮದ್ ಬಾವಾ ಮತ್ತು ಸಯ್ಯದ್ ನೌಷಾದ್ ಅಕ್ಟೋಬರ್ 4ರಂದು ಸೂರತ್ ಬಾಂಬ್ ಸ್ಫೋಟದ ಬಳಿಕ ಚಿಕ್ಕಮಗಳೂರಿನಲ್ಲಿ ಉಗ್ರರ ತರಬೇತಿ ಕೇಂದ್ರಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಇದೀಗ ಈ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಸೂರತ್ ಪೋಲಿಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಯೋಜನೆ ರೂಪಿಸಿರುವಂತೆ ಮಂಗಳೂರಿನಿಂದ ಬೋಟ್ ಮೂಲಕ ಶಸ್ತ್ರಾಸ್ತ್ರಗಳನ್ನು ಮುಂಬೈ ಸ್ಫೋಟಕ್ಕೆ ಸುಲಭವಾಗಿ ಸಾಗಿಸುವುದು ರಿಯಾಜ್ ಉದ್ದೇಶವಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಮಂಗಳೂರಿನಿಂದ ಪುಣೆಗೆ ತೆರಳುತ್ತಿದ್ದ ರಿಯಾಜ್ ಸ್ನೇಹಿತರಾದ ಚೌಧುರಿ ಪೊಲೀಸರು ಬಂಧಿಸಿದ್ದರು. ಬಳಿಕ ಅಹಮ್ಮದ್ ಬಾವಾ ಸೇರಿದಂತೆ ಇತರ ನಾಲ್ವರನ್ನು ಬಂಧಿಸಿದ್ದರಿಂದ ಈ ಯೋಜನೆಗೆ ಅಡ್ಡಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
|