ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಂದಿನಿಂದ ಪಕ್ಷದಲ್ಲಿ ಎಲ್ಲವೂ ಸರಿಯಿದ್ದ ಹಾಗೆ ಕಾಣುತ್ತಿಲ್ಲ. ಉನ್ನತ ಸ್ಥಾನ ನೀಡುವ ಭರವಸೆಯೊಂದಿಗೆ ಪಕ್ಷ ಸೇರಿದ ಸಿದ್ದರಾಮಯ್ಯನವರಿಗೆ ಬರೀ ಕನಸುಗಳೇ ಕಾಣಬೇಕಾಯಿತು ಹೊರತು ಸ್ಥಾನ ಮಾತ್ರ ಸಿಕ್ಕಿಲ್ಲ ಎಂಬ ಕೊರಗು ಇನ್ನೂ ಇದ್ದ ಹಾಗಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಳಿಕ ಪಕ್ಷದಿಂದ ದೂರ ಉಳಿದಿರುವ ಸಿದ್ದರಾಮಯ್ಯನವರು ಅನೇಕ ಬಾರಿ ಬಿಜೆಪಿ ಸೇರುವ ಬಗ್ಗೆ, ಅಹಿಂದಾ ಕಟ್ಟುವುದು ಸೇರಿದಂತೆ ಹಲವು ವದಂತಿಗಳು ಕೇಳಿ ಬರುತ್ತಿತ್ತು. ಆದರೆ ಎಲ್ಲದಕ್ಕೂ ಮೌನವೇ ಉತ್ತರವಾಗಿತ್ತು. ಇತ್ತೀಚೆಗೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಚಾರ ಕಣದಿಂದ ಹಿಂದೆ ಸರಿದಿರುವ ಸಿದ್ದರಾಮಯ್ಯನವರ ಮುಂದಿನ ರಾಜಕೀಯ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ಇದೇ ವೇಳೆ ಉಪಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಕುರಿತಂತೆ ಸೋಮವಾರದಂದು ಕಾಂಗ್ರೆಸ್ ಕರೆದಿರುವ ಸಭೆಗೆ ಇದುವರೆಗೆ ಸಿದ್ದರಾಮಯ್ಯನವರಿಗೆ ಆಹ್ವಾನ ಬಂದಿಲ್ಲವಂತೆ. ಆಹ್ವಾನ ಕಳಿಸಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ತಮಗೆ ಆಹ್ವಾನ ಬಂದಿಲ್ಲ ಎನ್ನುವ ಸಿದ್ದರಾಮಯ್ಯನವರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಸಿದ್ದರಾಮಯ್ಯನವರ ಪ್ರಚಾರ ಕಣದಿಂದ ಹಿಂದೆ ಸರಿದಿರುವುದೇ ಕಾರಣ ಎಂಬುದು ಹಲವು ನಾಯಕರ ಅಭಿಪ್ರಾಯ.
ಏತನ್ಮಧ್ಯೆ, ವಿವಿಧ ಪಕ್ಷಗಳ ಸುಮಾರು 25 ಶಾಸಕರು ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರಲ್ಲಿ ಹಲವರು ಜನತಾ ಪರಿವಾರದಿಂದ ಹೊರ ಬಿದ್ದಿರುವವರು, ಇತ್ತ ಜನತಾ ಪರಿವಾರ ಬಿಡಲಾರದೆ ಅತ್ತ ಬೇರೆ ಪಕ್ಷ ಸೇರಲಾಗದೆ ಸುಮ್ಮನಿರುವವರು, ಸಿದ್ದರಾಮಯ್ಯ ಜತೆ ಈಗಲೂ ವಿಶ್ವಾಸಿದಿಂದಿರುವವರು, ಕಾಂಗ್ರೆಸ್ ನಿಲುವಿನಿಂದ ಅಸಮಾಧಾನಗೊಂಡಿರುವ ಮುಖಂಡರೂ ಇದ್ದಾರೆ. ಇವರೆಲ್ಲರನ್ನು ಒಗ್ಗೂಡಿಸಿ ನೂತನ ಪಕ್ಷ ಕಟ್ಟುವ ಬಗ್ಗೆ ಸಿದ್ದರಾಮಯ್ಯ ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ. ಸಂಕ್ರಾತಿ ಬಳಿಕ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ತಿಳಿಸುತ್ತೇನೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ.
ಇವೆಲ್ಲವನ್ನೂ ಅವಲೋಕಿಸಿದಾಗ ಸಿದ್ದರಾಮಯ್ಯ ಕಾಂಗ್ರೆಸ್ಸಿದ ಹೊರನಡೆಯುವುದು ಬಹುತೇಕ ಖಚಿತ. ಮತ್ತೊಂದು ಮಾಹಿತಿ ಪ್ರಕಾರ, ಆಂಧ್ರದಲ್ಲಿ ಇತ್ತೀಚೆಗಷ್ಟೇ ನಟ ಚಿರಂಜೀವಿ ಹುಟ್ಟುಹಾಕಿರುವ ಪ್ರಜಾರಾಜ್ಯಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದಾರೆಂಬ ಮಾತುಗಳು ಕೇಳಿ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ಸಿನಿಂದ ದೂರ ಉಳಿದಿರುವ ಇನ್ನೊರ್ವ ನಾಯಕ ಅಂಬರೀಷ್ ಅವರನ್ನು ಸೇರಿಸಿಕೊಂಡೇ ಪಕ್ಷ ಬಲಪಡಿಸುವ ಕುರಿತು ಚಿಂತನೆ ಶುರುವಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜಕೀಯ ನಾಯಕರ ಕೇಂದ್ರಬಿಂದುವಾಗಿರುವ ಸಿದ್ದರಾಮಯ್ಯನವರ ಮುಂದಿನ ರಾಜಕೀಯ ನಡೆಯ ಕುರಿತು ರಾಜಕೀಯ ನಾಯಕರು ಕುತೂಹಲದಿಂದ ದೃಷ್ಟಿ ಹಾಯಿಸಿದ್ದಾರೆ.
|