ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಬಿರುಸಿನ ತಯಾರಿ ನಡೆಸಿದೆ. ಜನವರಿಯೊಳಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ತೀರ್ಮಾನಿಸಿದೆ.
ಪಕ್ಷದ ಕೇಂದ್ರ ಚುನಾವಣಾ ಪ್ರಚಾರ ಸಮಿತಿ ಜ.19ರಿಂದ 21ರ ವರೆಗೆ ಸಭೆ ನಡೆಸಿ ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದೆ. ಜ.28 ಮತ್ತು 29ರಂದು ಎರಡನೇ ಬಾರಿ ಸಭೆ ನಡೆಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಮಟ್ಟದ ಚುನಾವಣಾ ಸಮಿತಿ ಸಭೆ ಶೀಘ್ರದಲ್ಲಿಯೇ ನಡೆಯಲಿದೆ. ಅಭ್ಯರ್ಥಿಗಳ ಶಿಫಾರಸ್ಸು ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಯುವುದರೊಳಗೆ ಕಳುಹಿಸುವಂತೆ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಬಿಜೆಪಿ ಉದ್ದೇಶಿಸಿದೆ. 18 ರಿಂದ 25 ವಯಸ್ಸಿನ ಮತದಾರರನ್ನು ಆಕರ್ಷಿಸಲು ಪ್ರತಿ ಲೋಕಸಭಾ ಕ್ಷೇತ್ರ ಮಟ್ಟದಲ್ಲಿ ಜ.16ರಿಂದ ಒಂದು ತಿಂಗಳವರೆಗೆ ಪ್ರಚಾರಾಂದೋಲನ ಕೈಗೊಳ್ಳಲಿದೆ ಎಂದರು.
|