ಧಾರ್ಮಿಕವಾಗಿ ಕಂದರವನ್ನು ಏರ್ಪಡಿಸುತ್ತಿರುವ, ಕೋಮುಘರ್ಷಣೆಗೆ ಎಡೆಯಾಗುತ್ತಿರುವ ಮತಾಂತರವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೂಡಲೇ ಮತಾಂತರ ನಿಷೇಧ ಕಾಯ್ದೆ ರೂಪಿಸಬೇಕು ಎಂದು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಒತ್ತಾಯಿಸಿದ್ದಾರೆ.
ಭಾರತೀಯ ವಿಚಾರವಂತರ ವೇದಿಕೆ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 'ಮತಾಂತರ-ಸತ್ಯದ ಮೇಲೆ ಹಲ್ಲೆ' ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಸ್ಲಾಂ ಮತ್ತು ಕೈಸ್ತ ಧರ್ಮಗಳು ಸಾಧ್ಯವಾದಷ್ಟು ಜನರನ್ನು ಮತಾಂತರಗೊಳಿಸುವ ಗುರಿಯನ್ನು ಹೊಂದಿದ್ದು, ಸಹಸ್ರಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆ ಉಂಟಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಕೈಸ್ತರು ಧರ್ಮಿಯರು ಸೇವೆಯ ಹೆಸರಲ್ಲಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿದ್ದರೆ, ಇಸ್ಲಾಂ ಧರ್ಮ ಹಿಂಸಾ ಮಾರ್ಗವನ್ನೇ ಪವಿತ್ರ ಎಂದು ಬಗೆದು ಭಯೋತ್ಪಾದನೆಯಲ್ಲಿ ತೊಡಗಿಕೊಂಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬೌದ್ಧಿಕ ಸ್ವಾತಂತ್ರ್ಯ, ವಿಚಾರ ಮಂಡನೆ, ಚರ್ಚೆ ಮತ್ತು ಬದಲಾವಣೆಗೆ ಹಿಂದೂ ಧರ್ಮದಲ್ಲಿ ಸದಾ ಅವಕಾಶವಿದೆ. ಆದರೆ ಇತರ ಧರ್ಮಗಳಲ್ಲಿ ಅಂತಹ ಯಾವ ಅವಕಾಶವೂ ಇಲ್ಲ ಎಂದು ಭೈರಪ್ಪ ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚಿನ ಗಣ್ಯರು, ಸಾಹಿತಿ ಅನಂತಮೂರ್ತಿ ಅವರ ಹೆಸರನ್ನು ಪ್ರಸ್ತಾಪಿದೇ, ಬುದ್ದಿಜೀವಿಗಳು, ಜಾತ್ಯತೀತರು ಮತ್ತು ಭಯೋತ್ಪಾದನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಾಹಿತಿಗಳು ರಾಜಕಾರಣಿಗಳ ಸಂಗ ಬೆಳೆಸುತ್ತಿದ್ದಾರೆ ಎಂದು ಟೀಕಿಸಿದರು. |