ಮಾಗಡಿ ರಸ್ತೆಯ ಬಾಲಕ ಅಂಕುಶ್ ಅಪಹರಣ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗಾಗಿ ನಗರ ಪೊಲೀಸರ ತಂಡ ಆಂಧ್ರಪ್ರದೇಶಕ್ಕೆ ತೆರಳಿದೆ. ಆರೋಪಿಗಳ ಪತ್ತೆಗಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಆಂಧ್ರಕ್ಕೆ ತೆರಳಿದ್ದು, ಉಳಿದ ಎರಡು ತಂಡಗಳು ನಗರ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಶೋಧ ನಡೆಸಿವೆ.
ಅಪಹರಣಕಾರರು ಡಿ.31 ರಂದು ಆಂಧ್ರದಿಂದ ಪೋಷಕರಿಗೆ ಕರೆ ಮಾಡಿ 3 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಹೊಸ ವರ್ಷದ ನಂತರ ನಗರದಿಂದ ಹಾಗೂ ಎರಡನೇ ದಿನ ಗೌರಿಬಿದನೂರಿನಿಂದ ಕರೆ ಮಾಡಿದ್ದ. ಬಾಲಕನ ಸುರಕ್ಷಿತ ಬಿಡುಗಡೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಕುಟುಂಬದ ಜೊತೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಕಾಣೆಯಾಗಿದ್ದು, ಈತನ ಬಗ್ಗೆ ಶೋಧ ಕಾರ್ಯ ಮುಂದುವರಿದಿದೆ. ಮಾಧ್ಯಮದಲ್ಲಿ ಬಾಲಕನ ಅಪಹರಣ ಸುದ್ದಿ ಪ್ರಕಟವಾಗುತ್ತಿದ್ದಂತೆ ಆರೋಪಿಗಳು ಯಾವುದೇ ಕರೆ ಮಾಡದಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ, ಆದರೂ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಆರ್.ಪೂಜಾರ್ ತಿಳಿಸಿದ್ದಾರೆ.
ಬಾಲಕನ ಕುಟುಂಬ ವರ್ಗ ಆತಂಕದಲ್ಲಿದ್ದು, ತಮ್ಮ ಮಗನನ್ನು ಸುರಕ್ಷಿತವಾಗಿ ಬಿಡಿಸಿಕೊಡುವಂತೆ ಪಾಲಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. |