ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ಫಲಿತಾಂಶ ಸಿಗಲಿಲ್ಲ. ಈ ಸೋಲಿನ ಜವಾಬ್ದಾರಿ ಹೊರಲು ಸಿದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉಪ ಚುನಾವಣೆಯ ನಡೆದ 8 ಕ್ಷೇತ್ರಗಳಲ್ಲಿಯೂ ಪಕ್ಷ ಸೋಲಲು ನಮ್ಮ ಕಾರ್ಯತಂತ್ರ ವಿಫಲ ಆಗಿದ್ದೇ ಕಾರಣ. ಈ ಸೋಲಿನಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕೆಲವು ಕ್ಷೇತ್ರಗಳ ಫಲಿತಾಂಶ ಏನೆಂಬುದು ಮೊದಲೇ ಗೊತ್ತಿದ್ದರೂ ನಾವು ಹೋರಾಟ ಮಾಡಿದ್ದೇವೆ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರನ್ನು ಸೆಳೆದುಕೊಂಡು ಆರ್ಥಿಕ, ರಾಜಕೀಯ ಮತ್ತು ಸರ್ಕಾರದ ಶಕ್ತಿಯನ್ನು ಬಳಸಿಕೊಂಡು ಹೈಜಾಕ್ ಮಾಡಿದ್ದಾರೆ. ನಮಗೆ ಸಿಕ್ಕ ಅಲ್ಪ ಅವಧಿಯಲ್ಲಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೋರಾಟ ಮಾಡಿದ್ದೇವೆ. ಫಲ ಸಿಗದಿರಬಹುದು. ಕೆಲವು ಕ್ಷೇತ್ರಗಳಲ್ಲಿ ಕಳೆದ ಸಲಕ್ಕಿಂತ ಪಕ್ಷದ ಮತಗಳ ಪ್ರಮಾಣ ಹೆಚ್ಚಿದೆ ಎಂದು ಅವರು ಹೇಳಿದರು.
ಮದ್ದೂರು, ಕಾರವಾರ ಹಾಗೂ ದೊಡ್ಡಬಳ್ಳಾಪುರದಲ್ಲಿ ಅಭ್ಯರ್ಥಿಗಳನ್ನು ಕಾಂಗ್ರೆಸ್ ಬೆಳೆಸಿ ನಾಯಕರನ್ನಾಗಿಸಿತ್ತು. ಆದರೆ ಅವರನ್ನು ಬಿಜೆಪಿ ಸೆಳೆದುಕೊಂಡಿತು. ಬೇರೆಯವರನ್ನು ಅಲ್ಪ ಅವಧಿಯಲ್ಲಿ ತಯಾರಿ ಮಾಡುವುದು ಪಕ್ಷಕ್ಕೆ ಕಷ್ಟವಾಯಿತು ಎಂದು ಪಕ್ಷದ ಸೋಲಿನ ಕಥೆಯನ್ನು ಬಿಚ್ಚಿಡುತ್ತಾರೆ.
ಪ್ರಚಾರಕ್ಕೆ ಬನ್ನಿ ಅಂಥ ಕೈ ಮುಗಿದು, ಕೈ ಜೋಡಿಸಿ ಹೇಳಿದ್ದೇವೆ. ಕೆಲವು ನಾಯಕರ ಮನೆಗಳಿಗೆ ಹೋಗಿ ಪ್ರಚಾರಕ್ಕೆ ಬನ್ನಿ ಅಂಥ ಕಾಡಿದ್ದೇವೆ, ಬೇಡಿದ್ದೇವೆ. ಆದರೂ ಹತ್ತಾರು ನಾಯಕರು ಬರಲೇ ಇಲ್ಲ. ನಾನು ನಾಯಕನಲ್ಲ, ಪಕ್ಷದ ಕಾರ್ಯಕರ್ತ, ಮೇಡಂ ಹೇಳಿದ ಕೆಲಸವನ್ನು ಮಾಡುವುದಷ್ಟೇ ನನ್ನ ಕೆಲಸ. ಕೆಲವು ನಾಯಕರು ಮಾಡಿರುವ ತಪ್ಪುಗಳನ್ನು ಸಹಿಸಿಕೊಳ್ಳುವ ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಗೈರುಹಾಜರಿಗೆ ತಿರುಗೇಟು ನೀಡಿದರು.
|