ಬಿಎಂಐಸಿ ಯೋಜನೆಯಲ್ಲಿನ ಅವ್ಯವಹಾರ ಬಯಲಾಗುವ ಭೀತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾನನಷ್ಟ ಮೊಕದ್ದಮೆ ಹೂಡುವ ನಿರ್ಧಾರವನ್ನು ಕೈಬಿಟ್ಟಿದ್ದಾರೆಂದು ಗಂಭೀರವಾಗಿ ಆರೋಪಿಸಿರುವ ಮಾಜಿ ಪ್ರಧಾನಿ ದೇವೇಗೌಡ, ತಾಕತ್ತಿದ್ದರೆ ಅವರು ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲೆಸೆದಿದ್ದಾರೆ.ನೈಸ್ ಯೋಜನೆಯಲ್ಲಿ ಅಶೋಕ್ ಖೇಣಿ ಹಾಗೂ ಯಡಿಯೂರಪ್ಪ ಅವರು 30ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ಗೌಡರು ದೂರಿದ್ದರು. ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಗುಟುರು ಹಾಕಿತ್ತು.ಏತನ್ಮಧ್ಯೆ ಹೊಸ ವರ್ಷದಂದು ಮಾಜಿ ಪ್ರಧಾನಿ ದೇವೇಗೌಡರಿಗೆ ನೂತನ ವರ್ಷದ ಗಿಫ್ಟ್ ಎಂಬಂತೆ, ಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೌಡರಿಗೆ ಜನರೇ ತಕ್ಕ ಉತ್ತರ ನೀಡಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಯಡಿಯೂರಪ್ಪ ಸಮಜಾಯಿಷಿ ನೀಡಿದ್ದರು.ಆದರೆ ಇದೀಗ ಮಾನನಷ್ಟ ಮೊಕದ್ದಮೆ ನಿರ್ಧಾರದಿಂದ ಹಿಂದೆ ಸರಿದಿರುವ ಯಡಿಯೂರಪ್ಪ ಅವರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗೌಡರು, ಇದು ಮುಖ್ಯಮಂತ್ರಿಗಳ ಪಲಾಯನವಾದ ಎಂದು ಟೀಕಿಸಿದ್ದಲ್ಲದೇ, ಮಾನನಷ್ಟ ಮೊಕದ್ದಮೆ ಹೂಡಲಿ ಎಂಬುದಾಗಿಯೂ ತಿರುಗೇಟು ನೀಡಿದ್ದಾರೆ. |